ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ಕಾನೂನಿನಡಿಯಲ್ಲಿ ಶೀಘ್ರಗತಿಯಲ್ಲಿ ಬಗೆಹರಿಸುತ್ತೇವೆ ಎಂದು ಸಿಪಿಐ ಬಿ.ವಿ. ನ್ಯಾಮಗೌಡ ಹೇಳಿದರು.
ಅವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಜನರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಎಲ್ಲಿಯಾದರೂ ಅಸ್ಪೃಶ್ಯತೆ ಇರುವ ಮಾಹಿತಿ ಇದ್ದರೆ ಅದನ್ನು ಠಾಣೆಗೆ ತಿಳಿಸಿದಲ್ಲಿ, ಪೊಲೀಸ್ ಇಲಾಖೆ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಇತ್ತೀಚೆಗೆ ರೈತ ಹೋರಾಟ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನವಾದ ಪ್ರಕರಣ ಜಿಲ್ಲಾ ಡಿಸಿಆರ್ಇ ಪೊಲೀಸ್ನಲ್ಲಿ ದೂರು ದಾಖಲಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಯ ಜೊತೆಗೂಡಿ ಪ್ರಕರಣದ ಗಂಭೀರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರಾದ ಸುರೇಶ ನಂದೆಣ್ಣವರ, ಫಕ್ಕೀರೇಶ ಮ್ಯಾಟಣ್ಣವರ ಹಾಗೂ ಕೋಟೆಪ್ಪ ವರ್ದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಪೊಲೀಸ್ ಇಲಾಖೆ ಮೀನ–ಮೇಷ ಮಾಡುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ತಪ್ಪಿತಸ್ಥರ ಮೇಲೆ 5 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ ತಾಲೂಕುಗಳಲ್ಲಿ ದಲಿತ ಹಾಗೂ ಅಂಬೇಡ್ಕರ್ ಅಭಿಮಾನಿಗಳಿಂದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಪಿಎಸ್ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿಎಸ್ಐ ಟಿ.ಕೆ. ರಾಠೋಡ, ಹಿರಿಯರಾದ ಜಯಕ್ಕ ಕಳ್ಳಿ, ಮಲ್ಲೇಶ ವಡ್ಡರ, ಬಸವಣೆಪ್ಪ ನಂದೆಣ್ಣವರ, ಸದಾನಂದ ನಂದೆಣ್ಣವರ, ಮಂಜುನಾಥ ಗಜಾಕೋಶ, ಪ್ರಮೋದ ಕರಾಟೆ, ಸತೀಶ ನಾರಾಯಣಕರ, ಮಂಜುನಾಥ ಶಿರಹಟ್ಟಿ, ರಾಜಶೇಖರ ಮೆಲ್ಮುರಿ, ಸಂತೋಷ ಲಮಾಣಿ, ಅನಿಲ ನಂದೆಣ್ಣವರ, ಮಲ್ಲೇಶ ಮಣ್ಣಮ್ಮನವರ ಮುಂತಾದವರಿದ್ದರು. ಪ್ರಕಾಶ ಮ್ಯಾಗೇರಿ ನಿರೂಪಿಸಿದರು.



