ಬೆಳಗಾವಿ:- ಸದನದಲ್ಲಿ ಸರ್ಕಾರದ ವಿರುದ್ಧ ನಮ್ಮದೇ ಆದ ಅಸ್ತ್ರ ಪ್ರಯೋಗ ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕೆ ಇಲ್ಲ. ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಕೇವಲ ಬುಟಾಟಿಕೆ. ಈ ಬಗ್ಗೆ ಗಂಭೀರ ಚರ್ಚೆ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸರ್ಕಾರ ನಿಷ್ಕ್ರಿಯವಾಗಿದೆ. ಶಿಶುಗಳ ಮರಣ, ಬಾಣಂತಿಯರ ಸಾವು, ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ವಕ್ಫ್ ಆಸ್ತಿ ವಿವಾದದ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಬಾಣಂತಿಯರ ಸಾವುಗಳು ಬಗ್ಗೆ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸಿದೆ. ಇನ್ನೂ ಪಂಚಮಸಾಲಿ ಹೋರಾಟಗಾರರ ಅಹವಾಲನ್ನು ಸರ್ಕಾರ ಸ್ವೀಕರಿಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.
ಗ್ಯಾರಂಟಿಗಳಿಂದ ರಾಜ್ಯದ ಜನ ಆನಂದಲ್ಲಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ. ಆನೆ ನಡೆದದ್ದೇ ದಾರಿ ಎಂದು ತಿಳಿದುಕೊಂಡಿದ್ದಾರೆ. ದುರ್ಘಟನೆಗಳು ನಡೆದಾಗ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಈ ಸರ್ಕಾರ ಹಾಗೂ ಸಚಿವರದ್ದು ಉದ್ಧಟನದ ವರ್ತನೆಯೇ ಆಗಿದೆ. ಸದನದಲ್ಲಿ ಸರ್ಕಾರದ ವಿರುದ್ಧ ನಮ್ಮದೇ ಆದ ಅಸ್ತ್ರಗಳನ್ನು ಪ್ರಯೋಗ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.