ಹಾಸನ: ಹೊಂದಾಣಿಕೆ ರಾಜಕೀಯ ಮಾಡುವವರನ್ನು ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿ ದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಹೊಂದಾಣಿಕೆ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಪಕ್ಷ ಶುದ್ಧೀಕರಣ ಆಗಬೇಕೆಂದು ಅನೇಕ ಹಿರಿಯರ ಆಸೆ ಇತ್ತು. ಹಿರಿಯರ ಆಸೆಯಂತೆ ಪಕ್ಷ ಶುದ್ಧೀಕರಣವಾಗುತ್ತಿದೆ. ಬರುವ ದಿನಗಳಲ್ಲಿ ಎಲ್ಲವೂ ಸಹ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,
ಅಸಮಾಧಾನ ಹೊರಹಾಕಲು ಬೇರೆ ವ್ಯವಸ್ಥೆ ಮಾಡಿಕೊಡಬೇಕು. ಆ ದಿಕ್ಕಿನಲ್ಲಿ ಯೋಚನೆ ಮಾಡುತ್ತಾ ಇದ್ದೇವೆ. ನಾನಂತೂ ಅದರ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಹೊಂದಾಣಿಕೆ ವಾಕ್ಸಮರ ತಾರಕಕ್ಕೇರಿತ್ತು. ಈ ಬಗ್ಗೆ ಕೆಲ ನಾಯಕರು ಬಹಿರಂಗವಾಗಿಯೇ ಸ್ವಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.