ಗದಗ ಜಿಲ್ಲಾ ಪೊಲೀಸ್ ವತಿಯಿಂದ ಜನೋಪಯೋಗಿ ಕ್ರಮ: ಸಾರ್ವಜನಿಕರಿಂದ ಅಪಾರ ಮೆಚ್ಚುಗೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚಿನ ವರ್ಷಗಳಲ್ಲಿ ಗದಗ ಜಿಲ್ಲಾ ಪೊಲೀಸರು ಸಾರ್ವಜನಿಕ ಜನಸ್ನೇಹಿ ಆಡಳಿತವನ್ನು ನೀಡುವ ಮೂಲಕ ರಾಜ್ಯಮಟ್ಟದಲ್ಲಿಯೇ ಗುರುತಿಸಿಕೊಳ್ಳುವಂತೆ ಕೆಲಸ ಮಾಡುತ್ತಿದೆ. ಇದೀಗ ಮತ್ತೆ ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಿರಂತರ ಸಂಪರ್ಕ, ಸಾರ್ವಜನಿಕರ ಸುರಕ್ಷತೆ ಹಾಗೂ ಮೋಸ ಹೋಗುವುದನ್ನು ತಪ್ಪಿಸಲು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ವಿಶೇಷ ಕಾಳಜಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

Advertisement

ಪ್ರಸ್ತುತ ಅಂತರ್ಜಾಲ ಪ್ರಪಂಚದಲ್ಲಿ ಶಹರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಸಂಘ-ಸಂಸ್ಥೆಗಳಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಸಹಜವಾಗಿಯೇ ವಿವಿಧ ಗ್ರೂಪ್‌ಗಳನ್ನು ರಚಿಸುವುದು ಸಾಮಾನ್ಯ. ಇಂತಹ ಗ್ರೂಪ್‌ಗಳನ್ನು ಬಳಸಿಕೊಂಡರೆ ಸಾರ್ವಜನಿಕರಿಗೆ ಮಾಹಿತಿ ರವಾನಿಸುವುದು ಸುಲಭವಾಗುತ್ತದೆ ಎನ್ನುವ ಉದ್ದೇಶದಿಂದ ಗದಗ ಜಿಲ್ಲಾ ಪೊಲೀಸ್ ತನ್ನ ಅಧಿಕೃತ ಎಕ್ಸ್ ಖಾತೆ, ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯ ಕ್ಯೂಆರ್ ಕೋಡ್‌ಗಳನ್ನು ರಚಿಸಿದ್ದು, ಈ ಕೋಡ್‌ಗಳನ್ನು ಬಳಸಿ ಗ್ರೂಪ್‌ಗಳಿಗೆ ಸೇರಲು ಅನುಕೂಲ ಕಲ್ಪಿಸಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಲಿಂಕ್‌ಗಳನ್ನು ಬಳಸಿ ಸಾರ್ವಜನಿಕರು ಹಲವು ವಿಧಗಳಲ್ಲಿ ಮೋಸ ಹೋಗುತ್ತಿರುವದನ್ನು ಮನಗಂಡು, ಇಂತಹ ಲಿಂಕ್‌ಗಳ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವುದು ಇಲಾಖೆಯ ಉದ್ದೇಶವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವುದರಿಂದ ಅದರ ಬಗ್ಗೆ ಅರಿವು ಮೂಡಿಸುವುದು ಸುಲಭ ಎನ್ನುವ ದೃಷ್ಟಿಯಿಂದ ಗದಗ ಜಿಲ್ಲಾ ಪೊಲೀಸ್ ಎಕ್ಸ್ ಖಾತೆ, ಫೇಸ್‌ಬುಕ್ ಮತ್ತು ಟ್ವಿಟರ್‌ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡಲು ಮುಂದಾಗಿದೆ.

ಗದಗ ಜಿಲ್ಲಾ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಕ್ಯೂಆರ್ ಕೋಡ್ ಮತ್ತು ಲಿಂಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಜಿಲ್ಲೆಯಾದ್ಯಂತ ವಿವಿಧ ಗ್ರೂಪ್‌ಗಳಲ್ಲಿ ವೈರಲ್ ಆಗಿದೆ. ಜೊತೆಗೆ ಇಲಾಖೆ ಕೈಗೊಂಡ ಜಾಗೃತಿ ಕಾರ್ಯಕ್ರಮಗಳ ವಿಡಿಯೋಗಳನ್ನು ಸಹ ವೀಕ್ಷಿಸಬಹುದು. ಈ ಕ್ಯೂಆರ್ ಕೋಡ್ ಮೂಲಕ ಸಾರ್ವಜನಿಕರು ಇಲಾಖೆಯ ಲಿಂಕ್‌ಗಳನ್ನು ಬಳಸಿಕೊಂಡು ಗ್ರೂಪ್‌ಗಳಿಗೆ ಸೇರಿ ತಮಗೆ ಆದ ವಂಚನೆ ಮತ್ತು ಮೋಸದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಷ್ಟೇ ಅಲ್ಲದೆ, ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸಬಹುದಾಗಿದೆ.

ಸೈಬರ್ ಕ್ರೈಗಳ ಬಗ್ಗೆ ಅರಿವಿಲ್ಲದಂತೆ ನಿತ್ಯವೂ ಜನತೆ ವಿವಿಧ ಹಂತಗಳಲ್ಲಿ ಮೋಸ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಸಮರ್ಪಕ ಮಾಹಿತಿ ಇಲ್ಲದೇ ವಂಚನೆಗೆ ಒಳಗಾದವರು ಅಸಹಾಯಕರಾಗುತ್ತಿದ್ದರು. ಇದನ್ನು ಮನಗಂಡ ಇಲಾಖೆಯು ಜನತೆಗೆ ವಂಚನೆ ಮತ್ತು ಮೋಸ ಹೋಗುವುದನ್ನು ತಪ್ಪಿಸಲು ಮತ್ತು ಅಧಿಕೃತ ಜಾಲತಾಣಗಳ ಮೂಲಕ ನಿರಂತರ ಸಂಪರ್ಕ ಸಾಧಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಜನಸ್ನೇಹಿ, ಉಪಯುಕ್ತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

 

**ಕೋಟ್**

ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು, ಸೈಬರ್ ವಂಚನೆಗಳನ್ನು ತಡೆಗಟ್ಟಲು ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇಲಾಖೆಯ ಲಿಂಕ್‌ಗಳನ್ನು ಬಳಸಿ ಗ್ರೂಪ್‌ಗೆ ಸೇರಿ, ಇಲಾಖೆಯು ನೀಡುವ ಮಾಹಿತಿಯನ್ನು ಅರ್ಥೈಸಿಕೊಂಡು ಇತರರಿಗೂ ಸಹ ಈ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು.

– ಬಿ.ಎಸ್. ನೇಮಗೌಡ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.


Spread the love

LEAVE A REPLY

Please enter your comment!
Please enter your name here