ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕೊಡಗಿನ ಸೋಮವಾರಪೇಟೆ ತಾಲೂಕಿನ ಕಂಬಾರಗಂಡಿಗೆ ಗ್ರಾಮದಲ್ಲಿ ಬಾಲಕಿಯ ರುಂಡವನ್ನು ಬೇರ್ಪಡಿಸಿ ಕೊಂಡೊಯ್ದ ಘಟನೆ ಅಮಾನವೀಯವಾದುದು. ಎರಡೇ ದಿನಗಳಲ್ಲಿ ಆರೋಪಿ ಪೊನ್ನಂಡ ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಶ್ಲಾಘನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ಬಾಲಕಿಯ ಪ್ರಾಣ ಹರಣ ಮಾಡಿದ ಭೀಬತ್ಸ ಘಟನೆಯು ನಮ್ಮ ರಾಜಕೀಯ ವಲಯಗಳಲ್ಲಿ ವಿಶೇಷ ಚರ್ಚೆಯಾಗಲಿಲ್ಲ. ಇದರಿಂದಾಗಿ ರಾಜಕೀಯ ಲಾಭ ದೊರೆಯದು ಎಂಬುದನ್ನು ಅರಿತುಕೊಂಡ ಕೆಲ ರಾಜಕಾರಣಿಗಳು ಘಟನೆಯ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಇದು ಅಪಾಯಕಾರಿಯಾಗಿದೆ.
ಆರೋಪಿ ಪೊನ್ನಂಡ ಪ್ರಕಾಶ್ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಸರಕಾರ ಎಚ್ಚರ ವಹಿಸಿ ತ್ವರಿತಗತಿಯಲ್ಲಿ ಶಿಕ್ಷೆಯಾಗಲು ಪ್ರಯತ್ನಿಸಬೇಕು. ಆ ಕುಟುಂಬಕ್ಕೆ ಸರಕಾರ ಸರಿಯಾದ ರೀತಿಯಲ್ಲಿ ಪರಿಹಾರ ಕಲ್ಪಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.


