ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪೂರಕವಾಗಿರುವಷ್ಟೇ ಅಪಾಯಕಾರಿಯಾಗಿಯೂ ಪರಿಣಮಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರಿಟಿಗಳು ಮಾತ್ರವಲ್ಲ, ಅವರ ಕುಟುಂಬಸ್ಥರನ್ನೂ ಗುರಿಯಾಗಿಸಿಕೊಂಡು ದುರುಳರು ಅಶ್ಲೀಲ ಸಂದೇಶಗಳು, ಕೊಳಕು ಭಾಷೆ ಹಾಗೂ ನೆಗೆಟಿವ್ ಟ್ರೋಲ್‌ಗಳಿಗೆ ಇಳಿಯುತ್ತಿದ್ದಾರೆ. ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಹಾಗೂ ಪತ್ನಿಯನ್ನು ಟಾರ್ಗೆಟ್ ಮಾಡಿ ಕೆಟ್ಟ ಮೆಸೇಜ್‌ಗಳು ಹರಿದಾಡಿದ್ದವು. ಈ ಬಗ್ಗೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅದಕ್ಕೆ ಪ್ರತಿಕ್ರಿಯಿಸಿದರೆ ನಾವೇ ಚೀಪ್ ಆಗ್ತೀವಿ. ನೆಗೆಟಿವ್ ಟ್ರೋಲ್ ಮಾಡುವವರ ಬಗ್ಗೆ ಮಾತಾಡಿ ನನ್ನ ಸಮಯವನ್ನು ಯಾಕೆ ವ್ಯರ್ಥ ಮಾಡಿಕೊಳ್ಳಲಿ ಎಂದು ಸುದೀಪ್ ಹೇಳಿದ್ದಾರೆ. ಸೆಲೆಬ್ರೇಷನ್, ಕನ್ನಡ ನಾಡಿನ ಜನರ ಪ್ರೀತಿ ಮತ್ತು ತಾಯಂದಿರ ಮೆಚ್ಚುಗೆ ಬಗ್ಗೆ ಮಾತನಾಡೋಣ ಎಂದಿದ್ದಾರೆ.
ನನ್ನ ಮಗಳು ನಾನು ಎದುರಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಎದುರಿಸಬಲ್ಲಳು, ನನ್ನಿಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂಬ ನಂಬಿಕೆ ನನಗಿದೆ. ಕನ್ನಡ ಇಂಡಸ್ಟ್ರಿ ಅವಳನ್ನು ಸ್ವಾಗತಿಸಿದೆ, ಅವಳು ಹಾಡಿರುವ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಎಲ್ಲರಿಗೂ ಧನ್ಯವಾದ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.



