ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 8 ವರ್ಷಗಳ ಹಿಂದೆ ಆಶ್ರಯ ನಿವೇಶನ ಹಕ್ಕುಪತ್ರ ಪಡೆದಿದ್ದರೂ ಇದುವರೆಗೂ ತಮ್ಮ ಹೆಸರಿನ ನಿವೇಶನ ಗುರುತಿಸಿಕೊಡದೇ ಇರುವುದಕ್ಕೆ ಅಸಮಾಧಾನಗೊಂಡ ಫಲಾನುಭವಿಗಳು ಶನಿವಾರ ಪುರಸಭೆಗೆ ದೌಡಾಯಿಸಿ 8 ದಿನಗಳಲ್ಲಿ ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಡಬೇಕು ಮತ್ತು ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಈ ವೇಳೆ ತಮ್ಮ ಅಳಲು ತೋಡಿಕೊಂಡ ಕವಿತಾ ಪಾಟೀಲ, ದೀಪಾ ಕುಂದಗೋಳ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯ ತಮ್ಮಾ-ತಿಮ್ಮಿ ಗುಡ್ಡದಲ್ಲಿ 2018ರಲ್ಲಿಯೇ 438 ಫಲಾನುಭವಿಗಳಿಗೆ ನಗರ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಿದ್ದಾರೆ. ಅಂದಿನಿಂದ ಇವತ್ತಿನವರೆಗೂ ನಮ್ಮ ನಿವೇಶನ ಗುರುತಿಸಿಕೊಟ್ಟಿಲ್ಲ ಮತ್ತು ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ನಮ್ಮ ಜಾಗ ಯಾವುದೆಂದು ಗೊತ್ತಿಲ್ಲದಿದ್ದರೂ ಅನೇಕ ವರ್ಷಗಳಿಂದ ಪುರಸಭೆಗೆ ಟ್ಯಾಕ್ಸ್ ಕಟ್ಟುತ್ತಾ ಬಂದಿದ್ದೇವೆ. ಹಕ್ಕುಪತ್ರ ಪಡೆದು ಸ್ವಂತ ಸೂರಿನ ಕನಸು ಕಾಣುತ್ತಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಬೇಡಿಕೆಗಾಗಿ ಕಳೆದ ಹಲವಾರು ವರ್ಷಗಳಿಂದ ಎಲ್ಲ ಫಲಾನುಭವಿಗಳು ಸೇರಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕೈ-ಕಾಲು ಮುಗಿದು ಕೇಳಿಕೊಳ್ಳುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ನಿವೇಶನ ಗುರುತಿಸಿ ಸೌಲಭ್ಯ ಕಲ್ಪಿಸಿಕೊಟ್ಟರೆ ಗುಡಿಸಲು ಕಟ್ಟಿಕೊಂಡಾದರೂ ಬದುಕುತ್ತೇವೆ. ಇನ್ನಾದರೂ ಸಂಬಂಧಪಟ್ಟವರು ನಮ್ಮ ಗೋಳು ಕೇಳಬೇಕು ಎಂದು ವಿನಂತಿಸಿದರು.
ಕರವೇ ಮುಖಂಡ ಪ್ರಕಾಶ ಕೊಂಚಿಗೇರಿಮಠ, ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಬಸವರಾಜ ಹಿರೇಮನಿ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ಮಂಜು ಸುತಾರ ಮಾತನಾಡಿ, ಪಟ್ಟಣದಿಂದ ದೂರ ಇರುವ, ಜನವಸತಿಗೆ ಯೋಗ್ಯವಲ್ಲದ ಮತ್ತು ಸಂಪರ್ಕ ರಸ್ತೆಯೂ ಇಲ್ಲದ ನಿರ್ಜನವಾದ ಗುಡ್ಡದ ಪ್ರದೇಶದಲ್ಲಿ ಆಶ್ರಯ ನಿವೇಶನಕ್ಕೆ ಭೂಮಿ ಖರೀದಿಸಿದ್ದೇ ದೊಡ್ಡ ತಪ್ಪಾಗಿದೆ. ಇನ್ನು 8 ವರ್ಷಗಳ ಹಿಂದೆ ಹಕ್ಕುಪತ್ರ ನೀಡಿದ್ದರೂ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಮತ್ತು ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಟ್ಟಿಲ್ಲ. 8 ದಿನಗಳಲ್ಲಿ ಫಲಾನುಭವಿಗಳ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಫಲಾನುಭವಿಗಳೊಂದಿಗೆ ಅನೇಕ ಸಂಘಟನೆಗಳು ಪುರಸಭೆಯ ಮುಂದೆ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.
ಈ ವೇಳೆ ಫಲಾನುಭವಿಗಳಾದ ಪಲ್ಲವಿ ಹಿರೇಮಠ, ರೇವತಿ ಕಟ್ಟಿಮನಿ, ಶಿವಲೀಲಾ ಹಿಪ್ಪರಗಿ, ಶೋಭಾ ಕಮತದ, ಸುಶಿಲವ್ವ ಹಿರೇಮಠ, ನಿರ್ಮಲಾ ಬೆಳದಡಿ, ದ್ರಾಕ್ಷಾಯಣಿ ಮಲ್ಲಸಮುದ್ರ, ಶ್ಯಾಮಿನಾ ನದಾಫ್, ಸುಶೀಲಾ ಪಾಟೀಲ, ಲಲಿತಾ ಆರೇರ, ಪ್ರೇಮಾ ಮೇದೂರ, ಮಾದೇವಕ್ಕ ಗೂಡೂರ, ಜಮೀನಾ ಬೇಗಂ ಮುಂತಾದವರು ಇದ್ದರು.
ಬಾಕ್ಸ್
ಮನವಿ ಪತ್ರ ಸ್ವೀಕರಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ತಮ್ಮಾ-ತಿಮ್ಮಿ ಗುಡ್ಡದ ಹತ್ತಿರ 16 ಎಕರೆ ಜಮೀನಿನಲ್ಲಿ 648 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 438 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ನಿವೇಶನಕ್ಕೆ ಸಂಪರ್ಕ ರಸ್ತೆ ಕಲ್ಪಿಸುವ ಪ್ರಕ್ರಿಯೆ ನಡೆದಿದೆ. ಕಚ್ಚಾ ರಸ್ತೆ-ಗಟಾರು ನಿರ್ಮಿಸಿ ಕಲ್ಲು ನೆಡಲಾಗಿದೆ. ಶಾಸಕರೊಂದಿಗೆ ಚರ್ಚಿಸಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ರಸ್ತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ನಿವೇಶನ ಗುರುತಿಸಿಕೊಡಲಾಗುತ್ತದೆ ಎಂದರು.



