ಸುಶಿಕ್ಷಿತ ವಿದ್ಯಾರ್ಥಿಗಳು ಸಮಾಜದ ಆಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ವಿದ್ಯಾರ್ಥಿಗಳೇ ಮುಂದಿನ ದೇಶದ ಸಂಪತ್ತು. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೊತ್ಸಾಹ ನೀಡುತ್ತಿರುವುದು ಸಂತಸದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Advertisement

ಅವರು ನಗರದ ಕನಕ ಭವನದಲ್ಲಿ ನಡೆದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕಾಳಿದಾಸ, ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ, ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಹಾಗೂ ಕಾಳಿದಾಸ ಶಿಕ್ಷಣ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವತಂತ್ರ `ಅಮೃತ ಮಹೋತ್ಸವ ಮುನ್ನಡೆ’ ಯೋಜನೆಯಡಿ ಅಲ್ಪಾವಧಿ ಕೌಶಲ್ಯಾಧಾರಿತ ಕೋರ್ಸ್‌ ಗಳ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಕಿಟ್ ವಿತರಣೆ ಹಾಗೂ ರಾಕೇಶ ಸಿದ್ದರಾಮಯ್ಯ ಶಿಷ್ಯವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ದೊಡ್ಡ ಆಸ್ತಿಯಾಗಿದ್ದು, ಉನ್ನತ ಹುದ್ದೆಯನ್ನು ಪಡೆದು ಸಮಾಜದಲ್ಲಿ ಸೇವೆ ಸಲ್ಲಿಸಬೇಕು. ಮಕ್ಕಳು ಕೇವಲ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕಲಿಯುತ್ತಿದ್ದಾರೆಯೇ ಹೊರತು ಸಮಾಜಸೇವೆ ಮಾಡಬೇಕು ಎಂಬುವ ಬಯಕೆ ಅವರಿಗೆ ಇಲ್ಲ. ಗ್ರಾಮೀಣ ಭಾಗದಲ್ಲಿ ಕಲಿಯುವ ಮಕ್ಕಳು ನಿಮ್ಮ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಬೇಕು. ಕೇವಲ ಪದವಿ ಗಳಿಸುವುದೇ ಜೀವನವಲ್ಲ, ಅದರಲ್ಲಿ ಮಾನವೀಯ ಮೌಲ್ಯಗಳನ್ನು ಕಲಿತು ಸಮಾಜಕ್ಕೆ ತಾವೆಲ್ಲ ದಾರಿಯಾಗಬೇಕು ಎಂದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, 21ನೇ ಶತಮಾನ ಜ್ಞಾನಯುಗವಾಗಿದೆ. ಜ್ಞಾನ ಮತ್ತು ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನಮಾನ, ಗೌರವ ಸಿಕ್ಕೇ ಸಿಗುತ್ತದೆ. ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಶ್ರೀಮಂತಿಕೆ, ಅಧಿಕಾರ ಶಾಶ್ವತವಲ್ಲ. ಆದರೆ, ಶಿಕ್ಷಣ ನಮ್ಮ ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.

ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಮಾತನಾಡಿ, ರಾಕೇಶ್ ಸಿದ್ಧರಾಮಯ್ಯ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇಂದಿನ ದಿನಗಳಲ್ಲಿ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಭಾರತ ಬಲಿಷ್ಠಗೊಳ್ಳಲು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ದೇಶವನ್ನು ಸದೃಢಗೊಳಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಕುರುಬರ ಸಂಘ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರು, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಟರಾಜ ಜಿ.ಆರ್, ಶಶಿಧರ ರೊಳ್ಳಿ, ಬಸವರಾಜ ಗೊರವರ, ರಾಮಕೃಷ್ಣ ರೊಳ್ಳಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆ.ಎಚ್. ಪಾಟೀಲ, ಚನ್ನಮ್ಮ ಹುಳಕಣ್ಣವರ, ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ರವಿ ಗುಂಜಿಕರ, ಪ್ರಕಾಶ ಕರಿ ಮುಂತಾದವರು ಉಪಸ್ಥಿತರಿದ್ದರು.

ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣದ ಬಗ್ಗೆ ಹಗಲಿರಳು ಚಿಂತನೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ನಗರದ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಕುರುಬರ ಸಂಘ ಸ್ಥಾಪನೆಯಾದ ನಂತರ ಜಿಲ್ಲೆಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ರಾಕೇಶ ಸಿದ್ದರಾಮಯ್ಯ ಅವರ ಸ್ಮರಣೆಯೊಂದಿಗೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಮೂಲಕ ಅವರ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here