ರಾಮನಗರ:– ಒಂದೆಡೆ ಕರ್ನಾಟಕದಲ್ಲಿ ಜಾತಿಗಣತಿ ಕಿಚ್ಚು ಹೊತ್ತಿ ಉರಿಯುತ್ತಿದೆ. ರಾಜ್ಯದ ಪ್ರಬಲ ಸಮುದಾಯಗಳೇ ಜಾತಿಗಣತಿ ವರದಿಯನ್ನು ವಿರೋಧಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯ ಭಾಷಾವಾರು ಮೇಲೆ ರಚನೆ ಆಗಿರುವ ರಾಜ್ಯ. ಇಲ್ಲಿ ಜಾತಿಯ ವಿಚಾರ ಪ್ರಸ್ತಾಪ ಒಳ್ಳೆಯ ಬೆಳವಣಿಗೆ ಅಲ್ಲ. ಜಾತಿಗಣತಿ ಬಗ್ಗೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ಮಾತಿನ ದಾಟಿ ನೋಡಿದ್ದೇನೆ. ರಾಜಕೀಯ ನಾಯಕರು ನಾಲಿಗೆಗೆ ಲಗಾಮು ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನಗೆ ಜಾತಿಗಳ ಬಗ್ಗೆ ನಂಬಿಕೆ ಇಲ್ಲ, ಜಾತಿ ವಿಚಾರಕ್ಕೆ ನಾನು ಮಹತ್ವವನ್ನೂ ಕೊಡಲ್ಲ. ನನ್ನ ಮನೆಗೆ ಬಂದು ಯಾರಾದ್ರೂ ನೀನು ಯಾವಜಾತಿ ಅಂದ್ರೆ ನಾನು ಕನ್ನಡ ಜಾತಿ ಅಂತೀನಿ. ನಾನಂತೂ ಜಾತಿಗಣತಿ ವರದಿ ಓದಿಲ್ಲ. ಹಾಗಾಗಿ ಅದು ಸರಿಯೋ, ತಪ್ಪೋ ಅನ್ನುವ ಚರ್ಚೆ ಮಾಡಲ್ಲ. ಈ ಬಗ್ಗೆ ಶಾಸನಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ, ತೀರ್ಮಾನ ಮಾಡಿಕೊಳ್ಳಿ. ಆದನ್ನ ಬಿಟ್ಟು ರಸ್ತೆಯಲ್ಲಿ ನಿಂತು ಬೇಕಾಬಿಟ್ಟಿ ಮಾತನಾಡುವ ಕೆಲಸ ಬಿಡಿ ಎಂದು ರಾಜಕೀಯ ನಾಯಕರಿಗೆ ಚಾಟಿ ಬೀಸಿದರು