ಇಂದು ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಚಿತ್ರರಂಗದ ಕೆಲವು ಪ್ರಮುಖ ಬೇಡಿಕೆಗಳನ್ನು ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ನಲ್ಲಿ ಈಡೇರಿಸಿದ್ದಾರೆ. ಹಾಗಾದ್ರೆ ಈ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಏನೆಲ್ಲಾ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ.
ಮೈಸೂರಿನಲ್ಲಿ ಫಿಲಂ ಸಿಟಿ
ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ದಶಕಗಳಿಂದಲೂ ಕೇಳಿ ಬರ್ತಿದೆ. ಪ್ರತಿಬಾರಿ ಬಜೆಟ್ ಮಂಡನೆ ಆದಾಗಲು ಈ ವಿಷಯದಲ್ಲಿ ಚಿತ್ರರಂಗ ನಿರಾಸೆಯನ್ನೇ ಅನುಭವಿಸುತ್ತಾ ಬಂದಿತ್ತು. ಆದರೆ ಈ ಬಾರಿಗೆ ಬಜೆಟ್ ನಲ್ಲಿ ಫಿಲ್ಮಂ ಸಿಟಿ ನಿರ್ಮಾಣಕ್ಕೆ ಮೈಸೂರಿನಲ್ಲಿ 150 ಎಕರೆ ಜಾಗವನ್ನು ಕಾಯ್ದಿರಿಸಲಾಗಿದ್ದು ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕನ್ನಡ ಸಿನಿಮಾಗಳಿಗೆ OTT ವೇದಿಕೆ
ಕನ್ನಡ ಸಿನಿಮಾಗಳನ್ನು ಯಾವ ಒಟಿಟಿಗಳೂ ಖರೀದಿಸುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ ಆ ಸಮಸ್ಯೆಗಳನ್ನು ದೂರ ಮಾಡಲು ಸ್ವತಃ ಸರ್ಕಾರವೇ ಮುಂದಾಗಿ ಒಟಿಟಿ ವೇದಿಕೆ ಸೃಷ್ಟಿಸುತ್ತಿದ್ದು ಇಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಿದೆ. ಕೇರಳದಲ್ಲಿ ಈಗಾಗಲೇ ಈ ಮಾದರಿ ಚಾಲ್ತಿಯಲ್ಲಿದ್ದು ಸದ್ಯದಲ್ಲೇ ಕನ್ನಡದಲ್ಲೂ ಆರಂಭವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ಸಿನಿಮಾ ಕ್ಷೇತ್ರ ಕೈಗಾರಿಕಾ ನೀತಿ ಅಡಿ ತರಲು ನಿರ್ಧಾರ
ಸಿನಿಮಾ ಉದ್ಯಮವನ್ನು ಸಿನಿಮಾ ಕೈಗಾರಿಕೆ ಎಂದು ಘೋಷಿಸಲಾಗಿದೆ. ಸಿನಿಮಾ ರಂಗವನ್ನು ಕೈಗಾರಿಕೆಯನ್ನಾಗಿ ಗುರುತಿಸುವ ಮೂಲಕ ಕೈಗಾರಿಕಾ ನೀತಿಯ ಅಡಿ ಸರ್ಕಾರ ನೀಡುವ ಸವಲತ್ತುಗಳು, ನಿಯಮಗಳು ಸಿನಿಮಾ ರಂಗಕ್ಕೂ ಅನ್ವಯ ಆಗಲಿದೆ ಎಂದು ಸಿಎಂ ಹೇಳಿದ್ದಾರೆ.
ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೂಪದ ದರ
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳು ಬಹಳ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿವೆ ಎಂಬ ದೂರು ಹಿಂದಿನಿಂದಲೂ ಕೇಳಿ ಬರ್ತಿದೆ. ಒಂದು ಸಿನಿಮಾ ಬಂದಾಗ ಇದ್ದ ಬೆಲೆ ಮತ್ತೊಂದು ಸಿನಿಮಾಗೆ ಇರಲ್ಲ. ಈ ಮೂಲಕ ಮಲ್ಟಿಪ್ಲೆಕ್ಸ್ ಗಳು ದುಬಾರಿ ಹಣ ಪಡೆದು ಟಿಕೇಟ್ ನೀಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಸರ್ಕಾರವು, ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಲನಚಿತ್ರ ಅಕಾಡೆಮಿ ಅಭಿವೃದ್ಧಿ
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ಚಲನಚಿತ್ರ ಅಕಾಡೆಮಿಯನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ ಮಾಡಲಾಗುತ್ತದೆಯಂತೆ.