ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಮಠಾಧಿಪತಿಗಳು ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ನಡೆಸುತ್ತಿರುವ ವ್ಯಾಪಾರೀಕರಣದ ಬಗ್ಗೆ ಸಮಾಜಕ್ಕೆ ಸ್ಪಷ್ಟನೆ ನೀಡುವಂತೆ ಹಿಂದೂ ಸಂಘಟನೆಗಳ ಧುರೀಣ ರಾಜೂ ಖಾನಪ್ಪನವರು ಆಗ್ರಹಿಸಿದ್ದಾರೆ.
ಈ ಬಗ್ಗೆ ನೀಡಲಾದ ಪ್ರಕಟಣೆಯಲ್ಲಿ ಅವರು ಹೇಳಿದರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಲಿಂಗಾಯತ ಮಠಾಧಿಪತಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ನವೀಕರಣ ಸಂಬಂಧಿ ಒಪ್ಪಂದದ ವಿವರಗಳನ್ನು ಸಮಾಜಕ್ಕೆ ಬಹಿರಂಗಪಡಿಸಬೇಕಾಗಿದೆ.
ಲಿಂಗಾಯತ ವಠಾಧೀಶರು ಈ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದು, ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಮೂಲಕ ಲಿಂಗಾಯತ ಸಮಾಜವನ್ನು ಛಿದ್ರಗೋಳಿಸಲು ಸಿದ್ದರಾಮಯ್ಯನವರು ನೀಡಿರುವ ಗುತ್ತಿಗೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಬಸವ ಸಂಸ್ಕೃತಿ ಅಭಿಯಾನದ ಹೆಸರಿನಲ್ಲಿ ಲಿಂಗಾಯತ ಮಠಾಧಿಪತಿಗಳು ನಡೆಸುತ್ತಿರುವ ಅಭಿಯಾನದಿಂದ ಏನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಅವರು ಉದ್ಧರಿಸಿದ್ದಾರೆ.
ಹಿಂದೂ ಧರ್ಮದ ಭಾಗವಾಗಿರುವ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸುವ ಪ್ರಯತ್ನ ಈಗ ಸಿದ್ದರಾಮಯ್ಯ ತಕ್ಕ ಶಾಸ್ತಿಗೊಳಗಾಗಿದ್ದು, ಈ ಹಳೆಯ ಪ್ರಯತ್ನವನ್ನು ಮಠಾಧಿಪತಿಗಳ ಮೂಲಕ ಮುಂದುವರೆಸಲಾಗುತ್ತಿದೆ ಎಂದು ಅವರ ಅಭಿಪ್ರಾಯ.
ಇದರಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಓಲೈಸಲು ಧೂರ್ತತನವಿದೆ ಮತ್ತು ಇದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ಕಾಡಸಿದ್ಧೇಶ್ವರ ಶ್ರೀಗಳು ಎತ್ತಿರುವ ಪ್ರಶ್ನೆಗಳಲ್ಲಿ ಯಾವುದೇ ಪ್ರಶ್ನೆಗೆ ಲಿಂಗಾಯತ ಮಠಾಧಿಪತಿಗಳು ಉತ್ತರ ನೀಡುವ ತಾಕತ್ತಿಲ್ಲವೆಂದು ತಿಳಿಸಿದ್ದಾರೆ.
ಮರುದಿನವೇ ಕಾಡಸಿದ್ಧೇಶ್ವರ ಶ್ರೀಗಳು ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿಗಳ ಅಣತಿಯಿಲ್ಲದೆ ಯಾವುದೇ ಜಿಲ್ಲಾಧಿಕಾರಿ ಇಂತಹ ಕ್ರಮಕ್ಕೆ ಹೋಗುವುದು ಸಾಧ್ಯವಿಲ್ಲ.
ಲಿಂಗಾಯತ ಮಠಾಧಿಪತಿಗಳ ನಡವಳಿಕೆಯು ಬಸವ ಸಂಸ್ಕೃತಿ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೃಪಾಪೋಷಿತ ನಾಟಕ ಮಂಡಳಿಯಾಗಿಸಿದೆ ಎಂಬುದು ಸ್ಪಷ್ಟವಾಗಿದೆ ಎಂದು ಧುರೀಣ ರಾಜೂ ಖಾನಪ್ಪನವರು ಹೇಳಿದ್ದಾರೆ.