ವಿಜಯಸಾಕ್ಷಿ ಸುದ್ದಿ, ಗದಗ: ಸಚಿವ ಎಚ್.ಕೆ. ಪಾಟೀಲರು ಗದಗ ಜಿಲ್ಲೆಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಆದರೆ ಅವುಗಳನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಏನು ಪ್ರಯೋಜನವೇನು? ಬಾಣಂತಿ, ನವಜಾತ ಶಿಶುವಿಗೆ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಬೇಡವೇ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವಿಭಾಗದ ತೀವ್ರ ನಿಗಾ ಘಟಕ, ಮಹಿಳೆಯರು ಮತ್ತು ಮಕ್ಕಳ ವಾರ್ಡ್ಗಳಿಗೆ ಭೇಟಿ ನೀಡಿದ ಅವರು, ಬಾಣಂತಿ ಮತ್ತು ಮಕ್ಕಳ ವಾರ್ಡ್ಗಳಿಗೆ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಎಸಿ ಅಳವಡಿಸಿದ್ದರೂ ಅವು ಸುಸ್ಥಿತಿಯಲ್ಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಗದಗ ತಾಲೂಕಿನ ನಾಗಾವಿ ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಆಯೋಗ, ಬಿಸಿಯೂಟಕ್ಕೆ ತೊಗರಿಬೇಳೆ ಕೊರತೆ ಮತ್ತು ಕಳಪೆ ಬೇಳೆ ಕಂಡು ಅಸಮಾಧಾನ ವ್ಯಕ್ತಪಡಿಸಿತು. ಮುಳಗುಂದ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಪರಿಶೀಲಿಸಿತು. ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಬೇಕು. ಮಕ್ಕಳ ಪೊಲೀಸ್ ಕಲ್ಯಾಣ ಅಧಿಕಾರಿ ಸಹಿ ಮಾಡಿರಬೇಕು ಎಂದು ಸೂಚನೆ ನೀಡಿತು. ನಂತರ ಅಸುಂಡಿ ಗ್ರಾಮ ಪಂಚಾಯಿತಿಗೆ ಭೇಟಿ ಮಾಹಿತಿ ಸಂಗ್ರಹಿಸಿತು.
ಜಿಮ್ಸ್ ಭೇಟಿಗೂ ಮೊದಲು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿದ ಆಯೋಗ, ತಪ್ಪು ಮಾಹಿತಿ ನೀಡಿದ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತು. ಆಯೋಗದ ಸೂಚನೆ ಮೇರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಚಾರ್ಯೆ ಮಂಜುಳಾ ಆರಿಕಟ್ಟಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಮಹಾವಿದ್ಯಾಲಯದ ಹಾಸ್ಟೆಲ್ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಯೋಗ, ತಕ್ಷಣ ವಾರ್ಡನ್‌ರ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತು.
ಜಿಲ್ಲಾ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ಗೂ ಭೇಟಿ ನೀಡಿದ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮತ್ತು ಸದಸ್ಯರಾದ ಶೇಖರಗೌಡ ರಾಮತ್ನಾಳ, ಡಾ. ತಿಪ್ಪೇಸ್ವಾಮಿ ಕೆ.ಟಿ, ಮಹಿಳೆ ಮತ್ತು ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಒಳರೋಗಿಗಳನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ಮಕ್ಕಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು.