ಹೊಸಕೋಟೆ: ಹೊಸಕೋಟೆ–ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ವೀಲಿಂಗ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷೆಗೆ ಭಾರಿ ಆತಂಕ ಮೂಡಿಸಿದೆ.
ಬೈಕ್‌ಗಳ ನಂಬರ್ ಪ್ಲೇಟ್‌ಗಳನ್ನು ಕಳಚಿಕೊಂಡು ರಸ್ತೆಗಿಳಿಯುತ್ತಿರುವ ಪುಂಡರು, ಗುಂಪು ಗುಂಪಾಗಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲೇ ವೀಲಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಹೊಸಕೋಟೆ ತಾಲ್ಲೂಕಿನ ನೂತನ ಚೆನ್ನೈ ಎಕ್ಸ್‌ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಯುವಕರು ಗುಂಪಾಗಿ ಸೇರಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ಹೆದ್ದಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ವಾಹನ ಸಂಚಾರ ಮಾಡುವ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ವೀಲಿಂಗ್ ಮಾಡುವ ವೇಳೆ ವೇಗವಾಗಿ ಬೈಕ್‌ಗಳನ್ನು ಚಲಾಯಿಸುವುದರಿಂದ ಅಪಘಾತದ ಭೀತಿ ಹೆಚ್ಚಿದ್ದು, ಪ್ರಯಾಣಿಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ.
ಈ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



