ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಟ್ರೈನಿ ವೈದ್ಯರು ಹೊರ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದು, ತುರ್ತು ಸಂದರ್ಭದಲ್ಲಿ ಇಲ್ಲಿ ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಇರುವದರಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು ಖಾಯಂ ವೈದ್ಯಾಧಿಕಾರಿಯ ನೇಮಕಕ್ಕಾಗಿ ಕಾಯುತ್ತಿದ್ದಾರೆ.
ತಾಲೂಕಿನಲ್ಲಿ ಬೆಳ್ಳಟ್ಟಿ ಗ್ರಾಮವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಸುಮಾರು 30-40 ಹಳ್ಳಿಗಳ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಬೇಕಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ತಿಂಗಳುಗಳಿಂದ ಖಾಯಂ ವೈದ್ಯಾಧಿಕಾರಿ ಇಲ್ಲದೇ ಇರುವುದರಿಂದ ಈ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಾಧಿಕಾರಿ ಕೊರತೆ ಇರುವುದರಿಂದ ಜಿಮ್ಸ್ನ ಟ್ರೈನಿ ವೈದ್ಯರೊಬ್ಬರನ್ನು ಇಲ್ಲಿಗೆ ನಿಯೋಜಿಸಿದ್ದು, ಇವರು ಬೆಳಿಗ್ಗೆ 10 ಗಂಟೆಯಿಂದ 2ರವರೆಗೆ ಹೊರ ರೋಗಿಗಳ ತಪಾಸಣೆ ನಡೆಸುತ್ತಾರೆ. ಇದಾದ ಮೇಲೆ ತುರ್ತು ಸಂದರ್ಭದಲ್ಲಿ ಇಲ್ಲಿ ಚಿಕಿತ್ಸೆ ಸಿಗದೇ ಬೇರೆ ಕಡೆಗಳಲ್ಲಿ ತೆರಳಬೇಕಾಗಿದೆ.
ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವಾಗಿದ್ದು, ಸಹಜವಾಗಿ ಇಲ್ಲಿಯ ಅಧ್ಯಕ್ಷರು ಆರೋಗ್ಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅವರು ಅಧ್ಯಕ್ಷರಾಗಿ 16 ತಿಂಗಳು ಗತಿಸಿದರೂ ಸಹ ಅವರ ನೇತೃತ್ವದಲ್ಲಿ ಒಂದು ಸಭೆಯನ್ನೂ ನಡೆಸಿಲ್ಲ. ಬಂದ ಅನುದಾನದ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ. ಖಾಯಂ ವೈದ್ಯಾಧಿಕಾರಿ ಇಲ್ಲ, ರಾತ್ರಿ ವೇಳೆಯಲ್ಲಿ ಇಲ್ಲಿ ಚಿಕಿತ್ಸೆ ಸಿಗದೇ ಜನತೆ ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲವೆಂದು ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ ಆರೋಪಿಸುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುದ್ಧ ನೀರಿನ ಘಟಕವಿದ್ದರೂ ಸಮರ್ಪಕವಾಗಿ ನೀರು ಇಲ್ಲ, ಶೌಚಾಲಯಗಳ ಪೈಪ್‌ಲೈನ್ ಬ್ಲಾಕ್ ಆಗಿದ್ದು ದುರ್ನಾತ ಬೀರುತ್ತಿವೆ. ಹೊರಗಡೆಯಿಂದ ಶುದ್ಧ ನೀರನ್ನು ತಂದು ರೋಗಿಗಳಿಗೆ ನೀಡಲಾಗುತ್ತಿದೆ. 3 ಜನ ಸ್ಟಾಫ್ ನರ್ಸ್ ಮತ್ತು 3 ಜನ ಅಟೆಂಡರ್ ಪ್ರಾಥಮಿಕ ಆರೋಗ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸುಮಾರು 30-40 ಹಳ್ಳಿಗಳ ಜನತೆಯ ಆರೋಗ್ಯದ ಬಗ್ಗೆ ವಿಚಾರಿಸಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು ಖಾಯಂ ವೈದ್ಯರಿಲ್ಲದೇ ಈ ಭಾಗದ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಭಾಗದ ಜನತೆಯ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನಿಯೋಜನೆಗೆ ಮುಂದಾಗುವುದು ಅವಶ್ಯವಿದೆ.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ: ಸುಭಾಸ ದೈಗೊಂಡ, ಖಾಯಂ ವೈದ್ಯಾಧಿಕಾರಿ ಇಲ್ಲದೇ ಇರುವುದರಿಂದ ಗದಗ ಜಿಮ್ಸ್ನಿಂದ ಟ್ರೈನಿ ಸರ್ಜನ್ ರೋಟೇಶನ್ ಪದ್ಧತಿಯಲ್ಲಿ ಬರುತ್ತಿದ್ದು, ಶೀಘ್ರದಲ್ಲಿಯೇ ಸಮಿತಿ ರಚನೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ ಪ್ರತಿಕ್ರಿಯಿಸಿ, 16 ತಿಂಗಳಿನಿಂದ ಸಮಿತಿ ರಚನೆ ಮಾಡಿಲ್ಲ. ಅನುದಾನದ ಬಗ್ಗೆ ಮಾಹಿತಿ ನೀಡಿಲ್ಲ. ಸಿಬ್ಬಂದಿ ಕಚೇರಿಗೆ ಬಂದು ಸಹಿ ಮಾಡುವಂತೆ ಹೇಳುತ್ತಿದ್ದಾರೆ. ಖಾಯಂ ವೈದ್ಯರು ಇಲ್ಲದೇ ಇರುವುದರಿಂದ ಜನತೆ ತುರ್ತು ಸಂದರ್ಭದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. 30-40 ಹಳ್ಳಿಗಳ ಜನತೆಗೆ ವರವಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು ಕೇವಲ ಹೆಸರಿಗಷ್ಟೇ ಸಿಮೀತವಾದಂತೆ ಕಾಣುತ್ತಿದೆ ಎಂದರು.



