ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪಟ್ಟಣದ ಹೃದಯ ಭಾಗದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿಯ ಜಾಗೆಯಲ್ಲಿ ಕೃಷಿ ಮಾರಾಟ ಇಲಾಖೆ ವತಿಯಿಂದ 10 ಮಳಿಗೆಗಳನ್ನು ನಿರ್ಮಾಣ ಮಾಡಿ ಕೆಲವು ತಿಂಗಳುಗಳೇ ಕಳೆದರೂ ಸಹ ಇಲ್ಲಿಯವರೆಗೂ ಹರಾಜು ಆಗದೇ ಹಾಗೆಯೇ ಉಳಿದಿದ್ದು, ಇದೀಗ ಮಳಿಗೆಗಳ ಹರಾಜು ಯಾವಾಗ ಎಂದು ಪಟ್ಟಣದ ಜನತೆ ಕಾಯುತ್ತಿದ್ದಾರೆ.
ಶಿರಹಟ್ಟಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಬೆಳ್ಳಟ್ಟಿ ರಸ್ತೆಗೆ ಹೊಂದಿಕೊಂಡಿರುವ ಕೋಟ್ಯಂತರ ರೂ ಬೆಲೆ ಬಾಳುವ ಜಾಗೆಯಲ್ಲಿ ಇಲಾಖೆಯು 2022-23ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ 44 ಲಕ್ಷ ರೂ ವೆಚ್ಚದಲ್ಲಿ 10 ಮಳಿಗೆಗಳನ್ನು ನಿರ್ಮಿಸಿದೆ. ಮಳಿಗೆಗಳು ನಿರ್ಮಾಣಗೊಂಡಿದ್ದರೂ ಸಹ ಇವುಗಳ ಹರಾಜು ಪ್ರಕ್ರಿಯೆ ಇದುವರೆಗೂ ನಡೆದಿಲ್ಲ.
ಶಿರಹಟ್ಟಿ ಮತಕ್ಷೇತ್ರದ ಕೇಂದ್ರಸ್ಥಳವಾಗಿದ್ದರೂ ಸಹ ಇಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಕೇವಲ ಹೆಸರಿಗಷ್ಟೇ ಸಿಮೀತವಾದಂತೆ ಕಾಣುತ್ತಿದೆ. ಏಕೆಂದರೆ ಇಲ್ಲಿಯ ಉಪ ಮಾರುಕಟ್ಟೆಯಲ್ಲಿ 2 ಬೃಹತ್ ಗೋಡೌನ್‌ಗಳಿದ್ದು, ಇವುಗಳನ್ನು ಸಹ ಕೇಳುವವರಿಲ್ಲದಂತಾಗಿದೆ. ಇಲ್ಲಿ ವ್ಯಾಪಾರ ಮಾಡುವುದಕ್ಕೆ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ, ವಿಶಾಲವಾದ ಜಾಗೆ ಇದ್ದರೂ ಸಹ ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ರೈತರಿಗೆ ವರದಾನವಾಗಬೇಕಿದ್ದ ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ಶಿರಹಟ್ಟಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ಮಾರುಕಟ್ಟೆ ಮಾತ್ರ ಇದ್ದು, ಇದು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಬೇಕಿತ್ತು. ಆದರೆ ಈ ಭಾಗದಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಯಾರೂ ಕೈ ಹಾಕಿದಂತೆ ಕಾಣುತ್ತಿಲ್ಲ. ಜೊತೆಗೆ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಯಾವ ವ್ಯಾಪಾರಸ್ಥರು ಕೂಡಾ ಮುಂದೆ ಬರದೇ ಇರುವದರಿಂದ ತಾಲೂಕಿನ ರೈತರು ಮಾರುಕಟ್ಟೆಗೆ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲದೇ ಇರುವದು ತಾಲೂಕಿನ ಅಭಿವೃದ್ಧಿಗೂ ಸಹ ಹಿನ್ನಡೆಯಾಗಿದೆ.
ಸದ್ಯ ಶಿರಹಟ್ಟಿ ಪಟ್ಟಣದಲ್ಲಿರುವ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ, ಈ ಜಾಗೆಯನ್ನು ಸದ್ಬಳಕೆಯನ್ನು ಮಾಡಿಕೊಂಡು ರೈತರಿಗೆ ಮತ್ತು ಇಲ್ಲಿಯ ವ್ಯಾಪಾರಸ್ಥರಿಗೆ ಎಲ್ಲ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನಗಳು ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ಆಗಬೇಕಿದೆ ಎಂದು ತಾಲೂಕಿನ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿವಾನಂದ ಮಠ, ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಟೆಂಡರ್ ಕಮ್ ಬಹಿರಂಗ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕಾ ಕರವೇ ಅಧ್ಯಕ್ಷ ಬಸವರಾಜ ವಡವಿ, ಮಳಿಗೆ ನಿರ್ಮಾಣವಾಗಿದ್ದರೂ ಸಹ ಅವುಗಳನ್ನು ಹರಾಜು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸರಕಾರದ ಅನುದಾನ ಸದ್ವಿನಿಯೋಗವಾಗಬೇಕು. ಈ ನಿಟ್ಟಿನಲ್ಲಿ ಪಾರದರ್ಶಕತೆಯಿಂದ ಹರಾಜು ಪ್ರಕ್ರಿಯೆ ಮಾಡಿ, ಶಿರಹಟ್ಟಿ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಹೇಳಿದರು.