ರಾಮ್ ಚರಣ್ ಅವರ ಜೀವನದ ಅತ್ಯಂತ ಖುಷಿಯ ಕ್ಷಣದಲ್ಲಿ, ಅಭಿಮಾನಿಗಳ ಅತಿರೇಕ ನಡೆ ಆಘಾತಕಾರಿ ಕ್ಷಣಕ್ಕೆ ಕಾರಣವಾಗಿದೆ. ಅವಳಿ ಮಕ್ಕಳಿಗೆ ಪಾಲಕರಾದ ಸಂಭ್ರಮದ ನಡುವೆ, ತಮ್ಮ ಮೊದಲ ಮಗು ಕ್ಲಿನ್ಕಾರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅಭಿಮಾನಿಗಳ ಮುತ್ತಿಗೆಗೆ ಸಿಲುಕಿರುವುದು ಇದೀಗ ಚರ್ಚೆಯ ವಿಷಯವಾಗಿದೆ.
ರಾಮ್ ಚರಣ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟಾರ್ ನಟ. ಅವರ ಅಭಿಮಾನಿ ಬಳಗ ದೊಡ್ಡದಾಗಿದ್ದು, ಅವರು ಎಲ್ಲೆ ಹೋದರೂ ಫ್ಯಾನ್ಸ್ ಹಾಜರಿರುತ್ತಾರೆ. ಅದೇ ರೀತಿ ಉಪಾಸನಾ ದಾಖಲಾಗಿರುವ ಆಸ್ಪತ್ರೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಮನೆಯಿಂದ ಆಸ್ಪತ್ರೆಗೆ ಆಗಮಿಸಿದ ವೇಳೆ, ರಾಮ್ ಚರಣ್ ಅವರ ಕೈಯಲ್ಲಿ ಎರಡು ವರ್ಷದ ಮಗು ಇದ್ದುದನ್ನು ಕಂಡರೂ ಅಭಿಮಾನಿಗಳ ಕೂಗಾಟ, ತಳ್ಳಾಟ ನಿಲ್ಲಲಿಲ್ಲ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಪ್ರಯತ್ನಿಸಿದರೂ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮಗು ಜೊತೆ ಸುರಕ್ಷಿತವಾಗಿ ಆಸ್ಪತ್ರೆ ಪ್ರವೇಶಿಸುವುದು ರಾಮ್ ಚರಣ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಈ ವಿಡಿಯೋ ವೈರಲ್ ಆದ ಬಳಿಕ, “ಮಗು ಎಷ್ಟು ಗಾಬರಿ ಆಗಿರಬಹುದು” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿದೆ. ಇನ್ನೂ ಹಲವರು, “ಇದು ಅಭಿಮಾನವಲ್ಲ, ಅನಾಗರೀಕತೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸ್ಟಾರ್ ಕುಟುಂಬದ ಭದ್ರತೆ, ಅಭಿಮಾನಿಗಳ ಜವಾಬ್ದಾರಿ ಕುರಿತು ಈ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ.



