ವಿಜಯಸಾಕ್ಷಿ ಸುದ್ದಿ, ಗದಗ: 2024-2025ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಬಿಳಿಜೋಳ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸೋಮವಾರ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಬಿಳಿ ಜೋಳ ಉತ್ಪನ್ನವನ್ನು ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಬಿಳಿ ಜೋಳ ಹುಟ್ಟುವಳಿಗೆ ಜೋಳ-ಹೈಬ್ರೀಡ್ ಪ್ರತಿ ಕ್ವಿಂಟಲ್ಗೆ ರೂ. 3371, ಜೋಳ-ಮಾಲ್ದಂಡಿ ಪ್ರತಿ ಕ್ವಿಂಟಲ್ಗೆ ರೂ. 3421ರಂತೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದನುಸಾರ ಗದಗ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕ್ಫೆಡ್) ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ ಎಂದರು.
ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಜೋಳ ಉತ್ಪನ್ನ ಖರೀದಿ ನೋಂದಣಿ ಮಾರ್ಚ್ 25ರಿಂದ ಕೈಗೊಳ್ಳಲು ಹಾಗೂ ಏಪ್ರಿಲ್ 1ರಿಂದ ಮೇ 31ರವರೆಗೆ ಖರೀದಿ ಕಾರ್ಯ ಕೈಗೊಳ್ಳುವುದು ಎಂದು ಸೂಚಿಸಲಾಯಿತು. ಸರ್ಕಾರದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿ ಬಿಳಿ ಜೋಳ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಜೋಳವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 150 ಕ್ವಿಂಟಲ್ ಖರೀದಿಸಲು ಸೂಚಿಸಲಾಯಿತು.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಬಿಳಿ ಜೋಳ ಉತ್ಪನವನ್ನು ಗದಗ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಲಕ್ಷ್ಮೇಶ್ವರ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಮುಂಡರಗಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ರೋಣ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಖರೀದಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ, ಕೆ.ಎಫ್.ಸಿ.ಎಸ್.ಸಿ, ಮಾರ್ಕೆಟಿಂಗ್ ಫೆಡರೇಶನ್ ಗದಗ, ನರಗುಂದ ಹಾಗೂ ಗದಗ, ಕಾನೂನು ಮಾಪನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್ಗಳನ್ನು ನೇಮಿಸಬೇಕು. ಎಫ್.ಎ.ಕ್ಯೂ ಗುಣಮಟ್ಟದ ಬಿಳಿ ಜೋಳ ಖರೀದಿಸಲು ಹಾಗೂ ಬಿಳಿ ಜೋಳ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಮಹಸೀಲು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಸೂಚಿಸಿದರು.