ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಶ್ರೀ ಎಸ್.ಎಂ. ಡಬಾಲಿ ತಾಲೂಕಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸೆ. 16ರಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕಾ ಮಟ್ಟದ ಕ್ರೀಡಾಕೂಟ ನಡೆಯಿತು. ಇದರಲ್ಲಿ ಭಾಗಿಯಾದ ನೂರಾರು ವಿದ್ಯಾರ್ಥಿಗಳಿಗೆ ಸಮರ್ಪಕ ವಾಹನ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಖಾಸಗಿ ವಾಹನಗಳ ಟಾಪ್ ಮೇಲೆ ಪ್ರಯಾಣ ಮಾಡುತ್ತಿರುವುದು ಕಂಡುಬಂದಿತು.
ಕ್ರೀಡಾಕೂಟಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಕರೆದುಕೊಂಡು ಹೋಗಲು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ, ಅದನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಕ್ರೀಡಾಕೂಟಗಳು ಮುಗಿದ ಮೇಲೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ, ಖಾಸಗಿ ವಾಹನಗಳಲ್ಲಿ ಜಾಗ ಸಾಲದೇ ಶಾಲಾ ವಿದ್ಯಾರ್ಥಿಗಳು ಟಾಪ್ ಮೇಲೆಯೇ ಪ್ರಯಾಣಿಸುತ್ತಿದ್ದರೂ, ಯಾರೂ ಸಹ ಅದನ್ನು ತಡೆಯುವ ಗೋಜಿಗೆ ಹೋಗದೇ ಇರುವುದು — ವಿದ್ಯಾರ್ಥಿಗಳ ಸುರಕ್ಷತೆ ಯಾರ ಹೊಣೆ? ಎಂಬ ಪ್ರಶ್ನೆ ಮೂಡಿಸಿತ್ತು.
ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಲವು ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ದೈಹಿಕವಾಗಿಯೂ ಸದೃಢತೆಯಿಂದ ಇರಬೇಕು, ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕೆಂಬ ಉದ್ದೇಶಕ್ಕಾಗಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿರುವುದು ಸ್ವಾಗತಾರ್ಹ. ಆದರೆ ಇಂತಹ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದ್ದ ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಟಾಪ್ ಮೇಲೆ ಕುಳಿತುಕೊಂಡು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದಂತಲ್ಲವೇ? ಅವಘಡಗಳಾದರೆ ಯಾರು ಹೊಣೆ ಎಂಬ ಪ್ರಶ್ನೆಗಳು ರಸ್ತೆಯ ಬದಿಯಲ್ಲಿ ಸಂಚರಿಸುತ್ತಿದ್ದ ಅನೇಕರನ್ನು ಕಾಡಿದವು.
ಶಿರಹಟ್ಟಿ ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತರಗತಿಗಳು ಮುಗಿದ ನಂತರ ಬಸ್‌ಗಳಲ್ಲಿ ಪ್ರಯಾಣಿಸಲು ಹೆಣಗಾಡುತ್ತಿದ್ದಾರೆ. ಆದರೆ ಇದನ್ನು ಸರಿಪಡಿಸುವ ಗೋಜಿಗೆ ಯಾವೊಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ.


