ಬೆಂಗಳೂರು:- ನಡುರಸ್ತೆಯಲ್ಲೇ ಕಾಡಾನೆಗಳ ಹಿಂಡು ಬಿಎಂಟಿಸಿ ಬಸ್ ಒಂದನ್ನು ಅಡ್ಡಗಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಮುಖ್ಯರಸ್ತೆಯಲ್ಲಿ ಜರುಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗೆ ಆನೆಗಳು ಅಡ್ಡ ಬಂದಿವೆ. ಇದನ್ನು ನೋಡಿದ ಬಸ್ ಚಾಲಕ, ಬಸ್ ನಿಲ್ಲಿಸಿದ್ದು, ಪ್ರಯಾಣಿಕರು ಒಂದು ಕ್ಷಣ ಗಾಬರಿಗೆ ಒಳಗಾದರು.
ಕೆಆರ್ ಮಾರ್ಕೆಟ್‌ನಿಂದ ಗುಳ್ಳಹಟ್ಟಿ ಕಾವಲ್‌ಗೆ ಬಸ್ ಹೊರಟಿತ್ತು. ಗುಲ್ಲಹಟ್ಟಿ ಗ್ರಾಮದ ಮುಖ್ಯರಸ್ತೆಯಲ್ಲಿ ಈ ಕಾಡಾನೆಗಳ ದಂಡು ಎಂಟ್ರಿಯಾಗಿತ್ತು. ಗ್ರಾಮದವರು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಎಂಟು ಸಾಕಾನೆಗಳನ್ನು ಬನ್ನೇರುಘಟ್ಟ ಅರಣ್ಯಕ್ಕೆ ಓಡಿಸಿದರು. ಬನ್ನೇರುಘಟ್ಟ ಕಾಡಿನೊಳಗೆ ಸಾಕಾನೆಗಳನ್ನ ಮೊನ್ನೆರಾತ್ರಿ ಮೇಯಲು ಬಿಡಲಾಗಿತ್ತು. ಅದೇ ಆನೆಗಳ ಹಿಂಡು ಬೆಳಗ್ಗೆ ಕಾಡಂಚಿನ ಗುಲ್ಲಹಟ್ಟಿ ಕಾವಲ್ ಗ್ರಾಮದ ಮುಖ್ಯರಸ್ತೆಗೆ ಬಂದಿವೆ. ಕಾಡಾನೆಗಳು ಅಂತ ಗಾಬರಿಪಟ್ಟಿದ್ದ ಗ್ರಾಮಸ್ಥರು, ಅರಣ್ಯಾಧಿಕಾರಿಗಳು ಮತ್ತೆ ಕಾಡಿಗೆ ಓಡಿಸುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.