ಪರೀಕ್ಷೆಯೆಂಬ ಗುಮ್ಮನ ಭಯವೇಕೆ, ಆತ್ಮವಿಶ್ವಾಸವಿದ್ದರೆ ಗೆಲುವು ನಿನ್ನದೇ…

0
Spread the love

ಪ್ರತಿ ವರ್ಷ ಮಾರ್ಚ್ ಬಂತೆಂದರೆ ಬೇಸಿಗೆಯ ಬಿಸಿಲಿನ ಝಳದ ಜೊತೆಗೆ ಪರೀಕ್ಷೆಯ ಕಾವು ಕೂಡ ಸೇರಿ ಪ್ರತಿ ಮನೆಯಲ್ಲೂ ಒಂದು ರೀತಿಯ ಬಿಸಿ ವಾತಾವರಣ. ಗಲಭೆ-ಗಲಾಟೆಗಳು ಉಂಟಾದಾಗ ಹಾಕುವ 144 ಸೆಕ್ಷನ್‌ನ್ನು ಮನೆಯಲ್ಲೂ ಹಾಕಿದ್ದಾರೇನೋ ಎಂಬಂತಹ ಅನುಭವ ಕೊಡುವುದನ್ನು ಎಲ್ಲರೂ ಗಮನಿಸುತ್ತೇವೆ.

Advertisement

ಮನೆಯ ಹಿರಿ ತಲೆಯಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿರುವ ಮನೆಗಳಲ್ಲಿ ಒಂದು ರೀತಿಯ ಅಪೋಷಿತ ಬಂದ್ ವಾತಾವರಣ ಕಂಡುಬರುತ್ತದೆ. ಇದೆಲ್ಲದಕ್ಕೂ ಕಾರಣ ಪರೀಕ್ಷೆ ಎಂಬ ಗುಮ್ಮನ ಭಯ. ನಿಜ ಹೇಳಬೇಕೆಂದರೆ ಪರೀಕ್ಷೆ ಎಂಬುದು ಮಕ್ಕಳು ಇಡೀ ವರ್ಷ ತಮ್ಮ ತರಗತಿಯಲ್ಲಿ ತಾವು ಕಲಿತ ವಿಷಯಗಳನ್ನು ಎಷ್ಟರಮಟ್ಟಿಗೆ ಅರಿತುಕೊಂಡಿದ್ದಾರೆ ಎಂಬುದರ ಮೌಲ್ಯಮಾಪನ ಮಾತ್ರ. ವರ್ಷವಿತಿ ಹಾಳು ಹರಟೆಯಲ್ಲಿ ಸಮಯ ಕಳೆಯುವ ಮಕ್ಕಳು ಎಷ್ಟೋ ಬಾರಿ ಪರೀಕ್ಷೆಯ ಸಮಯದಲ್ಲಿ ಉರು ಹೊಡೆದು ಪಾಸ್ ಆಗುತ್ತಾರೆ. ಆದ್ದರಿಂದ ಈ ಮೌಲ್ಯಮಾಪನ ಕೂಡ ಒಂದು ಮಟ್ಟಿಗೆ ಸರಿಯಾದ ಫಲಿತಾಂಶವನ್ನು ನೀಡುವುದಿಲ್ಲ. ಪರೀಕ್ಷೆಯ ಇಂತಹ ಲೋಪದೋಷಗಳನ್ನು ಅರಿತೇ ಪರೀಕ್ಷಾ ಪ್ರಾಧಿಕಾರಗಳು ನಿರಂತರ ಮೌಲ್ಯಮಾಪನ ಕ್ರಮವನ್ನು ಅನುಸರಿಸುತ್ತಿರುವುದು ಸ್ವಾಗತಾರ್ಹ.

ಪರೀಕ್ಷೆಯನ್ನು ಎದುರಿಸುತ್ತಿರುವ ಮಕ್ಕಳು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಹೀಗಿವೆ.

  1. ರ‍್ಯಾಂಕಿಂಗ್‌ನ ಬಗ್ಗೆ ಎಂದೂ ಯೋಚಿಸಬಾರದು. ಓದಿನಲ್ಲಿ ನೀನು ಮುಂದುವರೆಯಬೇಕು ಎಂದಾದರೆ ನೀನಿರುವ ಶೈಕ್ಷಣಿಕ ಮಟ್ಟಕ್ಕಿಂತ ಕೆಳಗೆ ಇಳಿಯದಿದ್ದರೆ ಅದೇ ನಿಜವಾದ ಯಶಸ್ಸು.
  2. ಅತ್ಯಮೂಲ್ಯವಾದ ಸಮಯವನ್ನು ಎಂದೂ ಪೋಲು ಮಾಡಬಾರದು. ನಮ್ಮ ಜೀವನ ಕೆಲವೇ ವರ್ಷಗಳದ್ದು. ನಮ್ಮ ಬಹುತೇಕ ಸಮಯ ನಿದ್ದೆ, ಪ್ರಾರ್ಥನೆ, ಕೆಲಸ, ಊಟ ಮತ್ತು ನಾವು ಮಾಡುವ ಕಾರ್ಯ ಚಟುವಟಿಕೆಗಳಲ್ಲಿ ಸೋರಿ ಹೋಗುತ್ತದೆ. ಸಮಯದ ಸದ್ಬಳಕೆ ಮಾಡುವುದು ಅತ್ಯಂತ ಉತ್ತಮ ಹೂಡಿಕೆ. ಯಶಸ್ಸಿನ ಮೂಲ ಮಂತ್ರ ಉತ್ತಮ ಸಮಯ ನಿರ್ವಹಣೆ.
  3. ಅತ್ಯದ್ಭುತವಾದುದು ನಮ್ಮ ಬದುಕಿನಲ್ಲಿ ಘಟಿಸುತ್ತದೆ ಎಂಬ ಆಶಯದಿಂದ ಕಾಯಬಾರದು. ಅವಕಾಶಗಳು ನಿನ್ನ ಮನೆಯ ಬಾಗಿಲನ್ನು ತಟ್ಟುವುದಿಲ್ಲ, ಬದಲಾಗಿ ನೀನು ಅವಕಾಶಗಳನ್ನು ಖುದ್ದು ಸೃಷ್ಟಿಸಿಕೊಳ್ಳಬೇಕು. ಯಶಸ್ಸು ನಿನಗಾಗಿ ಸೃಷ್ಟಿಯಾಗುತ್ತದೆ.
  4. ನೀನು ತಿನ್ನುವ ಆಹಾರವಿರಲಿ, ನಿನ್ನ ತರಬೇತಿಯಾಗಲಿ ಪುಟ್ಟ ಮಗುವಿನಂತೆ ಪ್ರತಿಯೊಂದಕ್ಕೂ ತಕರಾರು ಮಾಡಬೇಡ. ತಾಳ್ಮೆಯ ಮತ್ತು ಯುದ್ಧವೀರನಂತಹ ವ್ಯಕ್ತಿತ್ವ ನಿನ್ನದಾಗಿರಲಿ. ಬದುಕು ನಿನ್ನೆಡೆಗೆ ಎಸೆಯುವ ಅದೆಷ್ಟೇ ಕಠಿಣ ಸವಾಲುಗಳಿದ್ದರೂ ಅವುಗಳನ್ನು ಯಶಸ್ವಿಯಾಗಿ ಎದುರಿಸು, ಕುಂದದೆ ಕುಗ್ಗದೆ ಮುನ್ನಡೆಯುವುದನ್ನು ಕಲಿ.
  5. ಪ್ರತಿ ಸೋಲಿನ ನಂತರ ಎದ್ದು ಹೋರಾಡುವ ಛಲವನ್ನು ಬೆಳೆಸಿಕೊ. ನೀನು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುವ ನೀನು ವಿದ್ಯಾರ್ಥಿ ದಿಸೆಯಲ್ಲಿ ಒಳ್ಳೆಯ ಸಾತ್ವಿಕ ಆಹಾರ, ಅವಶ್ಯ ಪ್ರಮಾಣದ ನಿದ್ದೆ, ನಿರಂತರ ಅಭ್ಯಾಸ ಮತ್ತು ಸದಾ ಮುಗುಳ್ನಗೆಯನ್ನು ಹೊತ್ತು ಸವಾಲನ್ನು ಸ್ವೀಕರಿಸುವ ಅಭ್ಯಾಸ ಮಾಡಿಕೋ. ಗಟ್ಟಿ ಮುಟ್ಟಾದ ದೇಹ ಮತ್ತು ಆತ್ಮವಿಶ್ವಾಸ ನಿನ್ನಲ್ಲಿದ್ದರೆ ನೀನೇ ಚಾಂಪಿಯನ್ ಎಂಬ ಭಾವ ನಿನ್ನನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ.
  6. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದರಿಂದ ನಿನ್ನ ವ್ಯಾವಹಾರಿಕ ತಿಳುವಳಿಕೆ ಹೆಚ್ಚಾಗುತ್ತದೆ ಮತ್ತು ನಿನಗೆ ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಜ್ಞಾನವನ್ನು ನೀಡುತ್ತದೆ. ನಿಮ್ಮ ಮೆದುಳು ಹೊಸದೇನನ್ನೂ ಉತ್ಪಾದಿಸುವುದಿಲ್ಲ, ಆದ್ದರಿಂದ ಸಾಮಾಜಿಕವಾಗಿ ಕಲಿಕೆಯ ಯಾವುದೇ ಅವಕಾಶಗಳನ್ನು ಕಳೆದುಕೊಳ್ಳದಿರು. ಹಾಗೆಂದು ಅತಿಯಾಗಿ ಬೆರೆಯದಿರು.
  7. ಅವರಿವರನ್ನು ಮಾದರಿಯಾಗಿ ಇಟ್ಟುಕೊಳ್ಳುವ ಬದಲು ನಿನ್ನನ್ನೇ ನೀನು ಮಾದರಿಯಾಗಿಸಿಕೋ. ನೀನು ದಡ್ಡನಲ್ಲ. ಅವರಿವರಂತೆ ನಿನ್ನನ್ನು ನೀನು ಬದಲಾಯಿಸಿಕೊಳ್ಳುವ ಬದಲು, ನೀನು ಬಯಸುವಂತೆ ನಿನ್ನ ಬದುಕನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಮೆದುಳಿಗೆ ಕೆಲಸವನ್ನು ನೀಡುವ ಮೂಲಕ ಅದನ್ನು ಸದಾ ಕ್ರಿಯಾಶೀಲವಾಗಿರಿಸಿಕೊಳ್ಳುವ ಜವಾಬ್ದಾರಿ ನಿನ್ನದೇ ಆಗಿದ್ದರೆ ಯಶಸ್ಸು ಖಚಿತ.
  8. ಹರೆಯದ ತುಮುಲಗಳು ಕಾಡುವ ಈ ಹೊತ್ತಿನಲ್ಲಿ ಯಾರೊಂದಿಗೂ ಅತಿಯಾದ ಆತ್ಮೀಯತೆ ಬೇಡ. ನಿಮ್ಮ ಜೀವನದ ಅತಿ ಮುಖ್ಯ ಪಾತ್ರ ನಿಮ್ಮ ಹೊರತು ನಿಮ್ಮ ಕುಟುಂಬದ ಸದಸ್ಯರ ಹೊರತು ಬೇರಾರೂ ಅಲ್ಲ ಎಂಬ ಸತ್ಯವನ್ನು ಅರಿತುಕೋ. ಒಳ್ಳೆಯ ಸ್ನೇಹ ಬೇರೆ, ಆದರೆ ಒಂದಲ್ಲ ಒಂದು ದಿನ ಅವರು ನಿಮ್ಮಿಂದ ದೂರವಾಗಬಹುದು ಎಂಬ ಜಾಗೃತಿ ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದು.
  9. ಬೇರೆಯವರು ನೀವು ಏನಾಗಲಿ ಎಂದು ಇಚ್ಛಿತ್ತಾರೋ ಹಾಗೆ ಇರಲು ಪ್ರಯತ್ನಿಸದಿರಿ. ನೀವು ನಿಮಗೆ ಬೇಕಾದಂತೆ ನಿಮ್ಮಲ್ಲಿ ಬದಲಾವಣೆಯನ್ನು ತಂದುಕೊಳ್ಳಿ. ಮೌಲ್ಯಗಳನ್ನು ಹೊಂದಿದ ದೇವರನ್ನು ಸಂಪ್ರೀತಗೊಳಿಸುವ ಆತ್ಮ ತೃಪ್ತಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಮೇಲಿನ ಸಲಹೆಗಳನ್ನು ಶೈಕ್ಷಣಿಕ ಬದುಕಿನಲ್ಲಿ ಮಾತ್ರವಲ್ಲ, ಜೀವನದ ಎಲ್ಲಾ ವಿಭಾಗಗಳಲ್ಲಿಯೂ ಅಳವಡಿಸಿಕೊಂಡರೆ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗುತ್ತದೆ. ಶೈಕ್ಷಣಿಕ ಬದುಕು ನಮ್ಮ ವೈಯಕ್ತಿಕ ಬದುಕಿನಿಂದ ಹೊರತಲ್ಲ ಎಂಬ ಸತ್ಯದ ಅರಿವು ನಮಗೆ ದೊರೆತಾಗ ನಾವು ಸಂಪೂರ್ಣ ಆತ್ಮ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತೇವೆ.. ಅಂತಹ ಆತ್ಮವಿಶ್ವಾಸದ ನಡೆ ನುಡಿ ಮತ್ತು ಕಾರ್ಯವೈಖರಿಗಳು ಯಶಸ್ವಿಗೆ ರಹ ದಾರಿ. ಏನಂತೀರಾ ಸ್ನೇಹಿತರೆ?

– ವೀಣಾ ಹೇಮಂತ್‌ಗೌಡ ಪಾಟೀಲ್,

ಮುಂಡರಗಿ.


Spread the love

LEAVE A REPLY

Please enter your comment!
Please enter your name here