ಹಿಂದಿ ಹೇರಿಕೆ ವಿರೋಧಿಸುವ ತಮಿಳುನಾಡು ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡುವುದು ಏಕೆ? ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. ಕಾಕಿನಾಡಿನ ಪಿತಾಂಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ‘ಕೆಲವರು ಸಂಸ್ಕೃತ, ಹಿಂದಿಯನ್ನು ಏಕೆ ಟೀಕಿಸುತ್ತಾರೆ ಗೊತ್ತಿಲ್ಲ.
ಆರ್ಥಿಕ ಲಾಭಕ್ಕಾಗಿ ತಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವ ತಮಿಳುನಾಡಿನ ರಾಜಕಾರಣಿಗಳು ಹಿಂದಿ ಭಾಷೆಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣ ಮಾಡಲು ಬಯಸುತ್ತಾರೆ. ಆದರೆ, ಹಿಂದಿಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ, ಇದು ಯಾವ ರೀತಿಯ ತರ್ಕ’ ಎಂದು ಪ್ರಶ್ನೆ ಮಾಡಿದ್ದಾರೆ.
‘ತಮಿಳು ಸೇರಿದಂತೆ ಭಾರತಕ್ಕೆ ಎಲ್ಲಾ ಭಾಷೆಗಳು ಬೇಕು. ಯಾವುದೋ ಎರಡು ಭಾಷೆ ಮಾತ್ರ ಸಾಕಾಗಲ್ಲ. ನಾವು ಭಾಷಾ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಜನರಲ್ಲಿ ಪ್ರೀತಿ ಮತ್ತು ಏಕತೆಯನ್ನು ಉತ್ತೇಜಿಸಲು ಭಾಷಾ ವೈವಿಧ್ಯತೆಯ ಅಗತ್ಯವಿದೆ’ ಎಂದಿದ್ದಾರೆ.
ಅವರು ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢಗಳಿಂದ ಆದಾಯ ಬಯಸುತ್ತಾರೆ, ಆದರೆ ಹಿಂದಿ ಬೇಡ ಎಂದು ಹೇಳುತ್ತಾರೆ. ಅದು ಅನ್ಯಾಯವಲ್ಲವೇ? ಅವರು ಬಿಹಾರದ ಕಾರ್ಮಿಕರನ್ನು ಸ್ವಾಗತಿಸುತ್ತಾರೆ ಆದರೆ ಭಾಷೆಯನ್ನು ತಿರಸ್ಕರಿಸುತ್ತಾರೆ. ಈ ವಿರೋಧಾಭಾಸ ಏಕೆ? ಈ ಮನಸ್ಥಿತಿ ಬದಲಾಗಬೇಕಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ.


