ವಿಮಾನ ಪ್ರಯಾಣವು ಬಸ್ ಅಥವಾ ರೈಲು ಪ್ರಯಾಣದಷ್ಟು ಸುಲಭವಾಗಿಲ್ಲ. ಪ್ರಯಾಣ ಆರಂಭಿಸುವ ಮುನ್ನ ಪ್ರಯಾಣಿಕರು ಹಾಗೂ ವಿಮಾನಕ್ಕೆ ಸಂಬಂಧಿಸಿದಂತೆ ಹಲವು ಹಂತದ ಪರಿಶೀಲನೆಗಳು ನಡೆಯುತ್ತವೆ.
ಪ್ರಯಾಣಿಕರ ವಿಷಯದಲ್ಲಿ ಗುರುತಿನ ಪರಿಶೀಲನೆ, ಬೋರ್ಡಿಂಗ್ ಪಾಸ್, ಪಾಸ್‌ಪೋರ್ಟ್ ತಪಾಸಣೆ ಕಡ್ಡಾಯವಾಗಿದ್ದು, ವಿಮಾನಕ್ಕೆ ಸಂಬಂಧಿಸಿದಂತೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೂ ಮುನ್ನ ತಾಂತ್ರಿಕ ದೋಷಗಳ ಪರಿಶೀಲನೆ ನಡೆಯುತ್ತದೆ.
ಇದಕ್ಕಿಂತಲೂ ಮಹತ್ವವಾದ ವಿಷಯವೆಂದರೆ, ವಿಮಾನ ಹಾರಾಟಕ್ಕೆ ಯೋಗ್ಯವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ವಿಶೇಷ ಪ್ರಯೋಗಾಲಯ ಪರೀಕ್ಷೆಗಳು. ಅವುಗಳಲ್ಲಿ ಪ್ರಮುಖವಾದುದು ‘ಚಿಕನ್ ಗನ್’ ಪರೀಕ್ಷೆ.
ವಿಮಾನ ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಹಕ್ಕಿಗಳು ಡಿಕ್ಕಿ ಹೊಡೆದು ಎಂಜಿನ್‌ಗೆ ಹಾನಿಯಾಗುವ ಘಟನೆಗಳನ್ನು ‘ಬರ್ಡ್ ಸ್ಟ್ರೈಕ್’ ಎಂದು ಕರೆಯಲಾಗುತ್ತದೆ. ಹಕ್ಕಿಯೊಂದು ಎಂಜಿನ್ ಒಳಗೆ ಪ್ರವೇಶಿಸಿದರೆ ಅಥವಾ ಬ್ಲೇಡ್‌ಗಳಿಗೆ ಸಿಕ್ಕಿಕೊಂಡರೆ, ಎಂಜಿನ್ ನಿಲ್ಲುವ ಅಥವಾ ಬೆಂಕಿ ಹೊತ್ತಿಕೊಳ್ಳುವಂತಹ ಅಪಾಯಗಳು ಉಂಟಾಗಬಹುದು. ಇಂತಹ ಘಟನೆಗಳು ವಿಶ್ವದಾದ್ಯಂತ ನಡೆದಿವೆ. ಭಾರತದಲ್ಲೇ 2020 ರಿಂದ 2025ರ ಮೊದಲಾರ್ಧದವರೆಗೆ ಪ್ರಮುಖ ಹತ್ತು ವಿಮಾನ ನಿಲ್ದಾಣಗಳಲ್ಲಿ ಸುಮಾರು 2,800 ಬರ್ಡ್ ಸ್ಟ್ರೈಕ್ ಪ್ರಕರಣಗಳು ದಾಖಲಾಗಿವೆ.
ಈ ಅಪಾಯಗಳನ್ನು ತಪ್ಪಿಸಲು ವಿಮಾನಗಳ ಎಂಜಿನ್, ಕಾಕ್‌ಪಿಟ್ ವಿಂಡ್‌ಶೀಲ್ಡ್ ಮತ್ತು ಇತರ ಪ್ರಮುಖ ಭಾಗಗಳು ಪಕ್ಷಿ ಡಿಕ್ಕಿಯನ್ನು ತಡೆಯುವಷ್ಟು ಬಲವಾಗಿವೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಪ್ರಯೋಗಾಲಯದಲ್ಲಿ ಸತ್ತ ಕೋಳಿಗಳನ್ನು ಅತೀವ ವೇಗದಲ್ಲಿ ವಿಮಾನದ ಭಾಗಗಳ ಮೇಲೆ ಎಸೆಯುವ ವಿಧಾನವನ್ನು ಬಳಸಲಾಗುತ್ತದೆ. ಈ ಪರೀಕ್ಷೆಯನ್ನೇ ‘ಚಿಕನ್ ಗನ್’ ಪರೀಕ್ಷೆ ಎಂದು ಕರೆಯಲಾಗುತ್ತದೆ.
ಈ ವಿಧಾನ 1950ರ ದಶಕದಲ್ಲಿ ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆ ಡಿ ಹ್ಯಾವಿಲ್ಯಾಂಡ್‌ನಿಂದ ಆರಂಭವಾಯಿತು. ಜೆಟ್ ಎಂಜಿನ್ ಬಳಕೆ ಹೆಚ್ಚಾದಂತೆ, ಪಕ್ಷಿ ಡಿಕ್ಕಿಗಳಿಂದ ಉಂಟಾಗುವ ಅಪಾಯವೂ ಹೆಚ್ಚಾಗಿತ್ತು. ಇದಕ್ಕೆ ವಿಶ್ವಾಸಾರ್ಹ ಪರಿಹಾರವಾಗಿ ಈ ಪರೀಕ್ಷೆಯನ್ನು ರೂಪಿಸಲಾಯಿತು. ಇಂದು ಇದು ವಾಯುಯಾನ ಸುರಕ್ಷತೆಯ ಪ್ರಮುಖ ಮಾನದಂಡವಾಗಿದೆ.
ಪರೀಕ್ಷೆಯ ವೇಳೆ ಸುಮಾರು 500 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಸತ್ತ ಕೋಳಿಗಳನ್ನು ಎಂಜಿನ್, ವಿಂಡ್‌ಶೀಲ್ಡ್ ಅಥವಾ ರೆಕ್ಕೆಗಳ ಮೇಲೆ ಎಸೆಯಲಾಗುತ್ತದೆ. ನಿಯಂತ್ರಿತ ವಾತಾವರಣದಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಹೈ-ಸ್ಪೀಡ್ ಕ್ಯಾಮೆರಾಗಳ ಮೂಲಕ ಪರಿಣಾಮಗಳನ್ನು ದಾಖಲಿಸಲಾಗುತ್ತದೆ. ನಂತರ ಎಂಜಿನಿಯರ್‌ಗಳು ವಿಮಾನದ ಭಾಗಗಳಿಗೆ ಉಂಟಾದ ಹಾನಿಯನ್ನು ವಿಶ್ಲೇಷಿಸುತ್ತಾರೆ.
ಈ ಪರೀಕ್ಷೆಯಲ್ಲಿ ಯಾವುದೇ ಗಂಭೀರ ದೋಷಗಳು ಕಂಡುಬಾರದಿದ್ದರೆ, ಆ ವಿಮಾನ ಅಥವಾ ಎಂಜಿನ್ ಮಾದರಿಯನ್ನು ಹಾರಾಟಕ್ಕೆ ಯೋಗ್ಯ ಎಂದು ಘೋಷಿಸಲಾಗುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಇಂತಹ ಕಠಿಣ ಪರೀಕ್ಷೆಗಳು ವಿಮಾನಯಾನ ಕ್ಷೇತ್ರದಲ್ಲಿ ಅನಿವಾರ್ಯವಾಗಿವೆ.



