ವಿಜಯಸಾಕ್ಷಿ ಸುದ್ದಿ, ಗದಗ : ಗದಗ ವಸ್ತುಸಂಗ್ರಹಾಲಯಕ್ಕೆ ಬೆರಳೆಣಿಕೆಯ ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಾರೆ. ರಾತ್ರಿಯಾದರೆ ಅದು ಕುಡುಕರ ಅಡ್ಡೆಯಾಗಿ ಬದಲಾಗುತ್ತದೆ. ಅಂತಹ ವಸ್ತು ಸಂಗ್ರಹಾಲಯಕ್ಕೆ 6.97 ಕೋಟಿ ರೂ. ವೆಚ್ಚ ಮಾಡುವ ಅಗತ್ಯವಿತ್ತೇ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಪ್ರಶ್ನಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಎಚ್.ಕೆ. ಪಾಟೀಲರು ಕೇವಲ 6 ಸಾವಿರ ಚದರ ಅಡಿ ಇರುವ ಗದಗ ವಸ್ತು ಸಂಗ್ರಹಾಲಯದ ಒಳಗಾಂಗಣ ವಿನ್ಯಾಸಕ್ಕೆ 6.97 ಕೋಟಿ ರೂ. ಅನುದಾನ ಬಳಕೆ ಮಾಡಿರುವುದರ ಹಿಂದೆ ದುಡ್ಡು ಹೊಡೆಯುವ ಹುನ್ನಾರವಿದೆ ಎಂದು ಆರೋಪಿಸಿದರು.
ಪಂ. ಪುಟ್ಟರಾಜ ಗವಾಯಿಗಳ ಸ್ಮಾರಕ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೇ ನಿಂತಿದೆ. ಅಂತಹ ಸಮಾಜಮುಖಿ ಕೆಲಸಕ್ಕೆ ನುದಾನ ಒದಗಿಸದೇ ವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಖರ್ಚು ಮಾಡುವುದರ ಹಿಂದೆ ಭ್ರಷ್ಟಾಚಾರದ ಅನುಮಾನ ಮೂಡುತ್ತದೆ ಎಂದು ಆರೋಪಿಸಿದರು.
ಗದಗ ನಗರದ ವೀರನಾರಾಯಣ ದೇವಸ್ಥಾನದ ಪುನರುತ್ಥಾನ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಿದ್ದೇಕೆ ಎಂದು ಪ್ರಶ್ನೆ ಮಾಡಿದ ಅವರು, ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಇದ್ದಾಗ್ಯೂ ತೆರವುಗೊಳಿಸಲಾಗಿದೆ. ಜನರ ವಿಶ್ವಾಸದೊಂದಿಗೆ ಕಾಮಗಾರಿ ನಡೆಸುವುದು ಬಿಟ್ಟು ಪೊಲೀಸ್ ಬಲ ಪ್ರಯೋಗದೊಂದಿಗೆ ಪುನರುತ್ಥಾನ ಕಾಮಗಾರಿ ನಡೆಸಿದ್ದು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಜೆಡಿಎಸ್ ಉಪಾಧ್ಯಕ್ಷ ಗಿರೀಶ ನೇತೃತ್ವದಲ್ಲಿ ಅ. 5ರಂದು ವೀರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು ಎಂದ ಅವರು, ಪ್ರಕರಣ ಕೋರ್ಟನಲ್ಲಿರುವ ಕಾರಣ ವಕಾರಸಾಲು ತೆರವು ಸಂದರ್ಭದಲ್ಲಿ ಎರಡು ಮದ್ಯದಂಗಡಿ ಬಿಟ್ಟು ಉಳಿದೆಲ್ಲ ವಕಾರಗಳನ್ನು ಒಡೆದರು. ಆದರೆ ದೇವಸ್ಥಾನದ ವಿಷಯ ಕೋರ್ಟಿನಲ್ಲಿದ್ದರೂ ಒಡೆದಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ ಸಂಶಿ, ಕೆ.ಎಫ್. ದೊಡ್ಡಮನಿ, ಬಸವರಾಜ ಅಪ್ಪಣ್ಣವರ, ಸಂತೋಷ ಪಾಟೀಲ, ಜೋಸೆಫ್ ಉದೋಜಿ, ರಮೇಶ ಹುಣಸಿಮರದ ಮುಂತಾದವರು ಉಪಸ್ಥಿತರಿದ್ದರು.
ಸಚಿವ ಜಮೀರ ಅಹ್ಮದ್ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲೂ ಅನೇಕ ರೈತರು, ಶಾಲೆ, ದೇವಸ್ಥಾನದ ಆಸ್ತಿಯಲ್ಲಿ ವಕ್ಫ್ ಎಂದು ನಮೂದಾಗಿರುವುದು ಗಮನಕ್ಕೆ ಬಂದಿದ್ದು, ಅಂಥವರು ನೆರವು ಕೋರಿದರೆ ಜೆಡಿಎಸ್‌ನಿಂದ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ವೆಂಕನಗೌಡ ಗೋವಿಂದಗೌಡ್ರ ತಿಳಿಸಿದರು.
ದೇಶದ ಧನಿಕರ ಸಂಪತ್ತನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಅದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಶ್ರೀಮಂತರ ಆಸ್ತಿಯನ್ನು ವಕ್ಫ್ ಬೋರ್ಡ್ಗೆ ಹಸ್ತಾಂತರ ಮಾಡಲಿ. ಅದಾದ ನಂತರ ಸಿರಿವಂತರ ಆಸ್ತಿಯನ್ನು ಬಡವರಿಗೆ ಹಂಚಿಕೆ ಮಾಡಲಿ.
– ವೆಂಕನಗೌಡ ಗೋವಿಂದಗೌಡ್ರ.
ಜೆಡಿಎಸ್ ರಾಜ್ಯ ವಕ್ತಾರ.