ಯುಗಾದಿ ಎಂದರೆ ಹೊಸ ವರ್ಷದ ಮೊದಲ ದಿನ. ಈ ದಿನವನ್ನು ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಹೊಸ ವರ್ಷದಲ್ಲಿ ಯಾವ ಯೋಜನೆಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸುವ ದಿನವೆಂದು ಪರಿಗಣಿಸಲಾಗುತ್ತದೆ.
ವೇದಗಳಲ್ಲಿ ವರ್ಷವನ್ನು ರಥಕ್ಕೆ, ಅದರ ಚಕ್ರವನ್ನು ಉತ್ತರಾಯಣ ದಕ್ಷಿಣಾಯಣಗಳಿಗೆ ಹೋಲಿಸಲಾಗುತ್ತದೆ. ಈ ಕಾರಣದಿಂದಲೇ ವರ್ಷವನ್ನು ಯುಗ ಮತ್ತು ಅದರ ಮೊದಲ ದಿನವನ್ನು ಯುಗಾದಿ ಎಂದು ಕರೆಯಲಾಗಿದೆ.
ಹಬ್ಬದ ಪ್ರಮುಖ ಸಂಪ್ರದಾಯ ಬೇವು-ಬೆಲ್ಲ ಸೇವಿಸುವುದು. ಬೇವು- ಕಷ್ಟ, ನೋವು, ಸವಾಲುಗಳ ಸಂಕೇತವಾಗಿದ್ದು, ಬೆಲ್ಲವು ಸಂತೋಷ, ಯಶಸ್ಸು, ಸುಖದ ಸಂಕೇತವಾಗಿದೆ. ಜೀವನದಲ್ಲಿ ಕೇವಲ ಸುಖ ಅಥವಾ ಕಷ್ಟವಷ್ಟೇ ಇಲ್ಲ; ಇದು ಬೇವು-ಬೆಲ್ಲದ ಮಿಶ್ರಣದಂತೆ, ಸುಖ-ದುಃಖ, ಲಾಭ-ನಷ್ಟಗಳನ್ನೂ ಸಮಾನವಾಗಿ ಅನುಭವಿಸುತ್ತೇವೆ. ಈ ಆಚರಣೆ ನಮಗೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ತೋರಿಸುತ್ತದೆ.
ಬೇವು-ಬೆಲ್ಲ ಸೇವಿಸುವಾಗ “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್” ಎಂಬ ಶ್ಲೋಕವನ್ನು ಉಚ್ಚರಿಸುತ್ತಾರೆ. ಇದರ ಅರ್ಥ: ನೂರು ವರ್ಷಗಳ ಆಯುಷ್ಯ, ವಜ್ರದಂತೆ ದೃಢ ದೇಹ, ಸಂಪತ್ತು ಮತ್ತು ಎಲ್ಲ ಅನಿಷ್ಟಗಳ ನಿವಾರಣೆಗಾಗಿ ಈ ಬೇವನ್ನು ಸೇವಿಸುತ್ತೇನೆ. ಆಯುರ್ವೇದ ಪ್ರಕಾರ, ಬೇವಿನ ಎಲೆಗಳು ಅನಿಷ್ಟಗಳನ್ನು ನಾಶಮಾಡುತ್ತವೆ, ದೇಹವನ್ನು ಬಲಿಷ್ಠಗೊಳಿಸುತ್ತವೆ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ.
ಹೀಗಾಗಿ ಯುಗಾದಿ ಹಬ್ಬವು ಹೊಸ ವರ್ಷಕ್ಕೆ ಶುಭಾರಂಭ ಮಾಡುವ ದಿನವಾಗಿದ್ದು, ಜೀವನದ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಪಾಠ ನೀಡುತ್ತದೆ.



