ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಾಮಾಣಿಕತೆ ತೋರಿಸಲು ಈ ಹಿಂದೆ 7 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದರೆ ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಸೇರಿದಂತೆ ಸಾವಿರಾರು ಜನರು ತಮ್ಮ ಮನೆ ಮೇಲೆ ದಾಳಿ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಒಬ್ಬ ಅಮಾಯಕ ಮೃತಪಟ್ಟಿದ್ದಾನೆ. ಇದು ತನ್ನ ಮೇಲೆ ನಡೆದ ಕೊಲೆ ಯತ್ನವಾಗಿದ್ದು, ಕಾಂಗ್ರೆಸ್ ಶಾಸಕರ ಬಂಧನ ತಪ್ಪಿಸಲು ಸಿಐಡಿಗೆ ವಹಿಸುವ ಮೂಲಕ ಪ್ರಕರಣವನ್ನು ಮುಚ್ಚುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ನಿರ್ಣಯದ ಮೂಲಕ ಒತ್ತಾಯಿಸಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.



