ಕೃಷಿ ನೀರಿನ ಹೊಂಡಕ್ಕೆ ಸೋಡಿಯಂ ಮೆಟಲ್ ಬಳಸಿ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರನ್ನ ಮಧುಗಿರಿಯ ಮಿಡಿಗೇಶಿ ಪೊಲೀಸರು ಅರೆಸ್ಟ್ ಮಾಡಿದ್ದರು. ಕಳೆದ 12 ದಿನಗಳಿಂದ ಪೊಲೀಸ್ ಕಸ್ಟಡಿ ಹಾಗೂ ನ್ಯಾಯಾಂಗ ಬಂಧನದಲ್ಲಿದ್ದ ಡ್ರೋನ್ ಪ್ರತಾಪ್ ಜಾಮೀನಿನ ಮೂಲಕ ಜೈಲಿನಿಂದ ಹೊರ ಬಂದಿದ್ದು ಈ ವೇಳೆ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಧುಗಿರಿ ಉಪಕಾರಾಗೃಹದಿಂದ ಹೊರ ಬಂದ ಡ್ರೋನ್ ಪ್ರತಾಪ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು. ನಾನು ಎಲ್ಲರಲ್ಲಿ ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಮಾಡಿರೋ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲ. ನನ್ನೊಬ್ಬನನ್ನೇ ಯಾಕೆ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
‘ನಮ್ಮ ದೇಶದಲ್ಲಿ ಆಗಿರಬಹುದು ಅಥವಾ ವಿದೇಶದಲ್ಲಿ ಆಗಿರಬಹುದು, ತುಂಬ ಜನ ಯೂಟ್ಯೂಬರ್ಗಳು ಇದನ್ನು ಮಾಡಿದ್ದಾರೆ. ಐಪಿಸಿ ಎಂಬುದು ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ಥರ ಅಲ್ಲ. ಬೇರೆಯವರೆಲ್ಲ ಕೆಜಿಗಟ್ಟಲೆ ಸೋಡಿಯಂ ಬಳಸಿ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ’ ಎಂದು ಪ್ರಶ್ನೆ ಮಾಡಿದ್ದಾರೆ.
‘ಕ್ರೇಜಿ ಎಕ್ಸ್ವೈಜಡ್, ಮಿಸ್ಟರ್ ಹ್ಯಾಕರ್ ಹಾಗೂ ಸಾಕಷ್ಟು ಜನ ಯೂಟ್ಯೂಬರ್ಗಳು ಇಂಥ ಪ್ರಯೋಗ ಮಾಡಿದ್ದಾರೆ. ಇಂಥ ಯಾರ ಮೇಲೂ ಕೇಸ್ ಮಾಡಿಲ್ಲ. ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಕ್ಕೆ ಉದ್ದೇಶ ಏನು ಎಂಬುದು ನೀವೇ ಹುಡುಕಬೇಕು. ನಾನು ಆ ಪ್ರಯೋಗ ಮಾಡಿದ್ದು ವಿಜ್ಞಾನ ಮತ್ತು ಶಿಕ್ಷಣದ ಉದ್ದೇಶಕ್ಕೆ ಅಂತ ಸೂಚನೆ ನೀಡಿಯೇ ಆ ವಿಡಿಯೋ ಹಾಕಿದ್ದೇನೆ’ ಎಂದಿದ್ದಾರೆ ಡ್ರೋನ್ ಪ್ರತಾಪ್.
‘ಅದು ಸರಳವಾದ ವಿಜ್ಞಾನದ ಪ್ರಯೋಗ. ಹೈಸ್ಕೂಲ್ ಪಠ್ಯ ಪುಸ್ತಕದಲ್ಲಿ ಆ ಪ್ರಯೋಗ ಇದೆ. ಶಾಲೆ, ಕಾಲೇಜಿನಲ್ಲಿ ಸೋಡಿಯಂ ತುಂಬ ಸುಲಭವಾಗಿ ಲಭ್ಯವಿದೆ. ಅದನ್ನು ಸ್ಫೋಟಕ ಅಂತ ತೋರಿಸಿ ದೊಡ್ಡದು ಮಾಡುವಂಥದ್ದು ಏನೂ ಇರಲಿಲ್ಲ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.