PM ಮೋದಿಗೆ ಕನ್ನಡಿಗರ ಮೇಲೇಕೆ ಈ ಮಲತಾಯಿ ಧೋರಣೆ? – ಸಿದ್ದರಾಮಯ್ಯ

0
Spread the love

ಬೆಂಗಳೂರು;- ಸಿಎಂ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳು ಭೀಕರ ಬರದಿಂದ ಕಂಗೆಟ್ಟಿವೆ. ಕೇಂದ್ರ ಬರ ಅಧ್ಯಯನ ತಂಡ ಅಧ್ಯಯನ ಮಾಡಿ ವಾಸ್ತವಿಕತೆಯ ವರದಿ ನೀಡಿದ್ದರೂ ಈವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಿಡುಗಡೆಯಾಗಿಲ್ಲ.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಜಗತ್ತಿನ ಕಷ್ಟ-ದುಃಖಗಳೆಲ್ಲ ಮಿಡಿಯುವ ನಿಮ್ಮ ವಿಶಾಲ ಹೃದಯ ಕನ್ನಡಿಗರ ಬಗ್ಗೆ ಇಷ್ಟು ಕಟುಕವಾಗಿರುವುದು ಯಾಕೆ?’

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ 2019ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ರಾಜ್ಯ ಸಾವು ನೋವಿನಲ್ಲಿ ಮುಳುಗಿತು. ಲಕ್ಷಾಂತರ ಕುಟುಂಬಗಳು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾದವು, ಆದರೂ ನೀವು ಕರ್ನಾಟಕಕ್ಕೆ ಬರಲಿಲ್ಲ.

ರಾಜ್ಯದ ಜನರಿಗಾದ ಅಪಾರ ನಷ್ಟಕ್ಕೆ ಕೇಂದ್ರದ ನೆರವಿನ ಮೊರೆ ಹೋದರೆ ಮತ್ತೆ ಕನ್ನಡಿಗರಿಗೆ ಸಿಕ್ಕಿದ್ದು ಬಿಡಿಗಾಸು ಮಾತ್ರ. ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆಯಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ’ ಎಂದು ಪ್ರಶ್ನೆ ಮಾಡಿದ್ದಾರೆ.

2017ರಲ್ಲಿ ಬರದಿಂದ ತತ್ತರಿಸಿಹೋಗಿದ್ದ ಕರ್ನಾಟಕದ ಜನತೆ ಕೇಂದ್ರದ ನೆರವಿಗಾಗಿ ನಿಮ್ಮತ್ತ ನೋಡುತ್ತಿದ್ದರು. ಆದರೆ ನಿಮ್ಮಿಂದ ನಮಗೆ ಸಿಕ್ಕಿದ್ದು ಬಿಡಿಗಾಸು ಪರಿಹಾರ. ರಾಜ್ಯದಲ್ಲಿ ಅಂದಾಜು 30 ಸಾವಿರ ಕೋಟಿ ರು. ನಷ್ಟ ಉಂಟಾದರೆ 1,435 ಕೋಟಿ ರು. ಪರಿಹಾರ ಬಿಡುಗಡೆಯಾಯಿತು.

ಅದೇ ಮಹಾರಾಷ್ಟ್ರ ರಾಜ್ಯಕ್ಕೆ 8,195 ಕೋಟಿ ರು. ಹಾಗೂ ಗುಜರಾತ್‌ಗೆ 4,894 ಕೋಟಿ ರು. ಬಿಡುಗಡೆ ಮಾಡಿದ್ದೀರಿ. ಕನ್ನಡಿಗರ ಮೇಲೇಕೆ ಈ ಮಲತಾಯಿ ಧೋರಣೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here