ದಾವಣಗೆರೆ: ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ಸಂಭವಿಸಿರುವ ಘಟನೆ ಇಡೀ ಜಿಲ್ಲೆಯನ್ನು ಶೋಕದಲ್ಲಿ ಮುಳುಗಿಸಿದೆ. ಮದುವೆಯಾಗಿ ಕೇವಲ 45 ದಿನಗಳಷ್ಟೇ ಆಗಿದ್ದ ಹರೀಶ್ (30) ಎಂಬ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹರೀಶ್ ಬರೆದಿರುವ ಎರಡು ಪುಟಗಳ ಡೆತ್ ನೋಟ್‌ನಲ್ಲಿ ಪತ್ನಿಯಿಂದ ಮಾನಸಿಕ ಕಿರುಕುಳ, ಅವಮಾನ ಹಾಗೂ ಜೀವ ಬೆದರಿಕೆ ಎದುರಿಸುತ್ತಿದ್ದೆ ಎಂದು ಉಲ್ಲೇಖಿಸಿದ್ದಾನೆ. ಪತ್ನಿ ಬೇರೆ ಯುವಕನೊಂದಿಗೆ ಓಡಿಹೋಗಿದ್ದು, ತಾನು ಹಿಂಸೆ ನೀಡುತ್ತಿದ್ದೆನೆಂಬ ಸುಳ್ಳು ಆರೋಪ ಹೊರಿಸಿದ್ದಾಳೆ ಎಂದು ದೂರಿದ್ದಾನೆ. ಈ ಎಲ್ಲ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿಸಿದ್ದಾನೆ.
ಡೆತ್ ನೋಟ್‌ನಲ್ಲಿ ಪತ್ನಿ ಹಾಗೂ ಆಕೆಯ ತಂದೆ, ತಾಯಿ, ಚಿಕ್ಕಪ್ಪನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಲ್ಲೇಖಿಸಿದ್ದಾನೆ. “ಮಾನವೇ ಜೀವನದ ಆಸ್ತಿ” ಎಂದು ಬರೆದಿರುವ ಹರೀಶ್, ತನ್ನ ನಿರ್ಧಾರಕ್ಕೆ ಕುಟುಂಬವನ್ನು ಕ್ಷಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಪತ್ನಿಯ ಕಡೆಯವರ ವರ್ತನೆಯಿಂದ ತನ್ನ ತಂದೆ-ತಾಯಿ ಮನೆ ಬಿಡುವ ಯೋಚನೆಗೂ ಬಂದಿದ್ದರು ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ನಡುವೆ, ಪ್ರಕರಣ ಮತ್ತೊಂದು ದಾರುಣ ತಿರುವು ಪಡೆದುಕೊಂಡಿದೆ. ಹರೀಶ್ ಮದುವೆಗೆ ಮುಂದಾಗಿ ನಿಂತಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಅನೆಕೊಂಡ ನಿವಾಸಿಯಾಗಿದ್ದ ರುದ್ರೇಶ್, ಯುವತಿ ನಾಲ್ಕು ದಿನಗಳ ಹಿಂದೆ ಕುಮಾರ್ ಎಂಬ ಯುವಕನೊಂದಿಗೆ ಓಡಿಹೋಗಿದ್ದ ಘಟನೆಯಿಂದ ತೀವ್ರವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.
ಒಟ್ಟಾರೆ, ಕುಟುಂಬದ ವಿವಾದ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅವಮಾನ — ಈ ಎಲ್ಲಾ ಅಂಶಗಳು ಸೇರಿ ಎರಡು ಜೀವಗಳನ್ನು ಕಳೆದುಕೊಂಡ ದಾರುಣ ದುರಂತಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಗಿದೆ.



