ಕೋಲಾರ: ಜಿಲ್ಲೆಯ ಆಜಾದ್ ನಗರದಲ್ಲಿ ಅಕ್ರಮ ಸಂಬಂಧದ ಆರೋಪದ ಹಿನ್ನೆಲೆ ನಡೆದ ರಾಜಿ ಸಂಧಾನ ಹಿಂಸಾತ್ಮಕ ತಿರುವು ಪಡೆದುಕೊಂಡು ಮಹಿಳೆಯೊಬ್ಬಳು ಮತ್ತೊಬ್ಬಳ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಾಗಿ ಗುರುತಿಸಲಾದ ಆಯೇಷಾ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರೂ, ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಆಯೇಷಾಳ ಪತಿ ಶಾಬಾಜ್ ಅಹಮದ್ ಮತ್ತು ಮುಸ್ಕಾನ್ ನಡುವೆ ಅಕ್ರಮ ಸಂಬಂಧ ಇರುವ ಶಂಕೆ ವ್ಯಕ್ತವಾಗಿತ್ತು. ಮುಸ್ಕಾನ್ ತನ್ನ ಪತಿಯಿಂದ ದೂರವಾಗಿದ್ದ ಸಂದರ್ಭ ಶಾಬಾಜ್ ಆಕೆಗೆ ಹಣಕಾಸಿನ ನೆರವು ನೀಡುತ್ತಾ ಸಂಬಂಧ ಬೆಳೆಸಿದ್ದನೆಂಬ ಆರೋಪವಿದೆ.
ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಬೆಂಗಳೂರಿಗೆ ಓಡಿ ಹೋಗಿದ್ದು, ಇತ್ತೀಚೆಗೆ ಸಂಬಂಧಿಕರು ಅವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದ್ದರು. ಈ ಹಿನ್ನೆಲೆ ಸಮಸ್ಯೆ ಬಗೆಹರಿಸಲು ಬುಧವಾರ ರಾತ್ರಿ ‘ರಾಜಿ ಪಂಚಾಯ್ತಿ’ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ವಾಗ್ವಾದ ತೀವ್ರಗೊಂಡ ವೇಳೆ, ಪೂರ್ವಸಿದ್ಧತೆಯೊಂದಿಗೆ ಬಂದಿದ್ದ ಆಯೇಷಾ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ಗಂಭೀರವಾಗಿ ಗಾಯಗೊಂಡ ಮುಸ್ಕಾನ್ ಅವರನ್ನು ಗಲ್ ಪೇಟೆ ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



