ಹಾವೇರಿ: ಮಗು ಹುಟ್ಟಿದ ಬಳಿಕವೂ ವರದಕ್ಷಿಣೆಯಾಗಿ ಪತ್ನಿಯನ್ನು ಹಿಂಸಿಸಿರುವ ಹೃದಯ ವಿದ್ರಾವಕ ಘಟನೆ ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮದಲ್ಲಿ ನಡೆದಿದೆ. ವರದಕ್ಷಣೆಗಾಗಿ ಹೆಂಡತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಗಂಡ, ಹೆಂಡತಿ ತವರು ಮನೆಗೆ ತೆರಳಿದ್ದಾಗ ಅಲ್ಲಿಗೂ ಹೋಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಶಹನಾಜಬಾನು ಅವರನ್ನು ಅದೇ ಗ್ರಾಮದ ಅಬೂಬಕ್ಕರ್ ಎಂಬಾತನೊಂದಿಗೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಕೆಲ ತಿಂಗಳು ಸುಖವಾಗಿ ಜೀವನ ಸಾಗಿಸಿದ್ದ ದಂಪತಿ ನಡುವೆ ಆ ಬಳಿಕ ಜಗಳ ಶುರುವಾಗಿದೆ. ಮಹಿಳೆಗೆ ವರದಕ್ಷಣೆಗಾಗಿ ಗಂಡ ಮತ್ತು ಆತನ ಮನೆಯವರಿಂದ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಇಬ್ಬರಿಗೆ ಒಂದೂವರೆ ವರ್ಷದ ಮಗು ಇದ್ದರೂ ಕೂಡ ವರದಕ್ಷಣೆ ಬೇಡಿಕೆಯ ಕಿರುಕುಳ ಕಡಿಮೆಯಾಗಿಲ್ಲ. ಅನಾರೋಗ್ಯದ ಕಾರಣ ಶಹನಾಜಬಾನು ತವರು ಮನೆಗೆ ತೆರಳಿದ್ದ ವೇಳೆ, ಗಂಡ ಅಬೂಬಕ್ಕರ್ ಹಾಗೂ ಆತನ ಮನೆಯವರು ತವರು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಶಹನಾಜಬಾನು ಅವರ ಅಕ್ಕನ ಕೈ ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪ್ರಕರಣ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.



