ಬೆಳಗಾವಿ:- ಜಿಲ್ಲೆ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಜೋಡಿಯನ್ನು ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಎಂದು ಗುರುತಿಸಲಾಗಿದೆ. ಜಗದೀಶ್ ಹಾಗೂ ಗಂಗಮ್ಮ ಮೊದಲಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಜಗದೀಶ್ ಬೇರೆ ಯುವತಿ ಜೊತೆ ಮದುವೆಯಾಗಿದ್ದು, ಸದ್ಯ ಪತ್ನಿ ಗರ್ಭಿಣಿ. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಾಗ ಇತ್ತ ಪ್ರೇಯಿಸಿಯೊಂದಿಗೆ ನದಿಗೆ ಹಾರಿ ಸಾವಿನ ಮನೆ ಸೇರಿದ್ದಾನೆ. ಸ್ವತಃ ಹೆಂಡ್ತಿಯೇ ಜಗದೀಶ್ ಹಾಗೂ ಗಂಗಮ್ಮಳ ಮದ್ವೆ ಮಾಡುವುದಾಗಿ ಹೇಳಿದ್ದಳು ಎಂದು ತಿಳಿದುಬಂದಿದೆ.
ಇಂದು ಮಲಪ್ರಭಾ ನದಿಯಲ್ಲಿ ತಬ್ಬಿಕೊಂಡ ರೀತಿಯಲ್ಲಿ ಎರಡು ಶವಗಳು ತೆಲಿ ಬಂದಿದ್ದು, ಇದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವಗಳನ್ನು ನದಿ ದಡಕ್ಕೆ ತಂದು ನೋಡಿದಾಗ ಜಗದೀಶ್ ಹಾಗೂ ಗಂಗಮ್ಮ ಎನ್ನುವುದು ಗೊತ್ತಾಗಿದೆ. ಮದುವೆಯಾಗಿದ್ದವ ಪತ್ನಿ ಬಿಟ್ಟು ಪ್ರೇಯಸಿ ಜೊತೆಗೆ ಸಾವಿನ ಮನೆ ಸೇರಿದ್ದಾನೆ. ಇನ್ನೊಂದೆಡೆ ಗಂಗಮ್ಮಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



