ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಜಾಜಿಕಲ್ ಗುಡ್ಡದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಾವಿಹಳ್ಳಿ, ಕೊಂಗನಹೊಸೂರು, ಕಣಿವಿಹಳ್ಳಿ ಗ್ರಾಮದ ರೈತರುಗಳ ಜಮೀನುಗಳಿಗೆ ಕಾಡು ಹಂದಿಗಳು ನುಗ್ಗಿ ಶೇಂಗಾ ಮತ್ತು ಮೆಕ್ಕೆಜೋಳ ಸೇರಿ ಇತರೆ ಬೆಳೆಗಳನ್ನು ಕಳೆದ ಹಲವು ದಿನಗಳಿಂದ ನಾಶಪಡಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಬಾವಿಹಳ್ಳಿ ಗ್ರಾಮದ ಪೂಜಾರ್ ಬಸಪ್ಪ ಹಗೂ ನೆಲ್ಕುದ್ರಿ ಬಸವರಾಜ್ ಎನ್ನುವ ರೈತರ ಜಮೀನುಗಳಿಗೆ ಗುರುವಾರ ನಸುಕಿನ ಜಾವ ಕಾಡು ಹಂದಿಗಳು ನುಗ್ಗಿ ಅಪಾರ ಪ್ರಮಾಣದ ಮೆಕ್ಕೆ ಜೋಳವನ್ನು ಹಾನಿಗೊಳಿಸಿವೆ. ಇದರ ಬಗ್ಗೆ ಕ್ರಮ ವಹಿಸಲು ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸದೆ ನಿರ್ಲ್ಯಕ್ಷ ವಹಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಸುತ್ತಮುತ್ತಲಿನ ನೂರಾರು ರೈತರ ಜಮೀನುಗಳಿಗೆ ಕಾಡು ಹಂದಿ ನುಗ್ಗಿ ಬೆಳೆ ನಾಶವಾದ ಬಗ್ಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲಾಖೆಯಲ್ಲಿ ಹಣ ಮಂಜೂರಾಗದ ಕಾರಣ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಪರಿಹಾರ ಸಿಕ್ಕಿತ್ತು. ಕಾಡಿನಿಂದ ಪ್ರಾಣಿಗಳು ಹೊರಬರದಂತೆ ಸೂಕ್ತ ಕ್ರಮ ವಹಿಸಲು ರೈತರು ವಿನಂತಿಸಿದರೂ ಕೂಡ ಅಧಿಕಾರಿಗಳು ರೈತರ ಮಾತನ್ನು ಆಲಿಸುತ್ತಿಲ್ಲ ಎಂದು ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಂದಿಗಳು ಬೆಳೆ ನಾಶಪಡಿಸಿದ ಜಮೀನುಗಳಿಗೆ ಭೇಟಿ ನೀಡಿದ್ದೇವೆ. ಎಷ್ಟು ಬೆಳೆ ಹಾನಿಯಾಗಿದೆಯೋ ಅದಕ್ಕೆ ಪರಿಹಾರ ಒದಗಿಸಲು ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಆದರೆ ಪರಿಹಾರದ ಹಣ ಯಾವಾಗ ಬರುತ್ತದೆ ಎಂಬುದು ನಮಗೂ ಗೊತ್ತಿಲ್ಲ ಎಂದು ಚಿಗಟೇರಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದರು.