ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಶನಿವಾರ ಸಂಜೆ ಭೀಕರ ಕಾಡಾನೆ ದಾಳಿಗೆ 17 ವರ್ಷದ ವಿದ್ಯಾರ್ಥಿನಿ ಪೂಜಾ ಬಲಿಯಾಗಿದ್ದಾರೆ.
ಮಡಿಕೇರಿ ಸಂತ ಮೈಕೆಲ್ ಶಾಲೆಯ ಪ್ರಥಮ PUC ಯಲ್ಲಿದ್ದ ಪೂಜಾ, ಸಂಜೆ 5:30ಕ್ಕೆ ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಬಸ್ಸಿನಿಂದ ಇಳಿದು ದಾರಿಯಲ್ಲಿ ಸಾಗುತ್ತಿದ್ದಾಗ, ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯುವತಿಯ ಶವವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಪೂಜಾ ಹತ್ಯೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಭಾರೀ ದುಃಖ, ಆತಂಕ ಮತ್ತು ಆಕ್ರೋಶ ಮೂಡಿಸಿದೆ.



