ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪು ಇಂದು ಬರಲಿದೆ. ಇದರ ಜೊತೆಗೆ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ಕೂಡ ನಡೆಯಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ದರ್ಶನ್ ಹಾಗೂ ಲಕ್ಷ್ಮಣ್, ಜಗದೀಶ್, ನಾಗರಾಜ್, ಪ್ರದೂಷ್ ಸೇರಿ ಈ ಪ್ರಕರಣದ ಕೆಲ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರೆ ಆರೋಪಿಗಳನ್ನ ಬೇರೆ ಜೈಲಿಗೆ ಹಾಕುವುದರ ಕುರಿತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರೆ ನಟ ದರ್ಶನ್ ಬೆಡ್ ಶೀಟ್ ಅರ್ಜಿ ಸಲ್ಲಿಸಿದ್ದಾರೆ.
ಇಂದು 64ನೇ ಸೆಷನ್ಸ್ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಲಿದೆ. ದರ್ಶನ್ ಸೇರಿ ಇತರೆ ಆರೋಪಿಗಳನ್ನು ಬೇರೆ ಜೈಲಿಗೆ ಕಳುಹಿಸಬಾರದು ಎಂದು ದರ್ಶನ್ ಪರ ವಕೀಲರು ಕೋರ್ಟ್ಗೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಕೊಲೆ ಪ್ರಕರಣದ ಟ್ರಯಲ್ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಬಳ್ಳಾರಿಗೆ ಶಿಫ್ಟ್ ಮಾಡಿದ್ರೆ ವಕೀಲರ ಭೇಟಿಗೆ ಕಷ್ಟವಾಗಲಿದೆ. ಅಲ್ಲದೆ ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟ. ಹೀಗಾಗಿ ಬಳ್ಳಾರಿ ಶಿಫ್ಟ್ ಮಾಡದಂತೆ ನಟನ ಪರ ವಕೀಲ ಸುನೀಲ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಸ್ಥಳಾಂತರ ಕೋರಿರುವ ಅರ್ಜಿ ವಿಚಾರಣೆ ಜೊತೆಗೆ ಜೈಲಿನಲ್ಲಿ ಕನಿಷ್ಠ ಸವಲತ್ತು ಕೋರಿ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜೈಲಿನಲ್ಲಿ ಮ್ಯಾನ್ಯುಯಲ್ ಪ್ರಕಾರ ಎರಡು ದಿಂಬು, ಎರಡು ಬೆಡ್ ಶೀಟ್, ದಟ್ಟ ಹಾಗೂ ಹೆಚ್ಚುವರಿ ಬಟ್ಟೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಿ ನ್ಯಾಯಾಲಯ ಇಂದು ಆದೇಶ ನೀಡಲಿದೆ.