ಮಂಡ್ಯ: ಮಾಜಿ ಸಂಸದ, ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ವಕ್ತಾರ ಎಲ್.ಆರ್. ಶಿವರಾಮೇಗೌಡ ವಿರುದ್ಧದ ವೈರಲ್ ಆಡಿಯೋ ಪ್ರಕರಣ ಇದೀಗ ರಾಜಕೀಯ ಘರ್ಷಣೆಗೆ ಕಾರಣವಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವರಾಮೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ ಸೇರಿದಂತೆ ಹಲವು ನಾಯಕರುಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಳಗೆ ಆಕ್ರೋಶ ವ್ಯಕ್ತವಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರದಲ್ಲಿ, ಪಕ್ಷದ ಗೌರವಕ್ಕೆ ಧಕ್ಕೆ ನೀಡುವಂತಹ ವರ್ತನೆಗೆ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.
ಈ ಆರೋಪ ತಳ್ಳಿ ಹಾಕಿರುವ ಶಿವರಾಮೇಗೌಡ ,ಆಡಿಯೋವನ್ನು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ ಮತ್ತು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬುದು ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನೊಪ್ಪಲು ಮಂಡ್ಯದ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಗಮನಾರ್ಹವಾಗಿ, ಶಿವರಾಮೇಗೌಡ ಜೆಡಿಎಸ್‌ನಲ್ಲಿ ಇದ್ದಾಗಲೂ ಇದೇ ರೀತಿಯ ಆಡಿಯೋ ವಿವಾದದಲ್ಲಿ ಸಿಲುಕಿದ್ದರು ಮತ್ತು ಪಕ್ಷದಿಂದ ಉಚ್ಚಾಟನೆ ಕೂಡ ಆಗಿದ್ದರು.
ಈ ಘಟನೆ ಜೆಡಿಎಸ್ ನಂತರ ಈಗ ಕಾಂಗ್ರೆಸ್‌ನಲ್ಲಿ ಮರುಕಳಿರುವುದರಿಂದ, ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.



