ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಭಿವೃದ್ಧಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಹೋರಾಟಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿದೆ. ಮುಂದೆಯೂ ಕೂಡ ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಹೇಳಿದರು.
ಅವರು ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕರವೇ ಜಿಲ್ಲಾಮಟ್ಟದ ಸಭೆ, ಜಿಲ್ಲಾ ಪದಾಧಿಕಾರಿಗಳು, ತಾಲೂಕಾಧ್ಯಕ್ಷರು, ತಾಲೂಕಾ ಪದಾಧಿಕಾರಿಗಳ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್ಗಳು ಅಭಿವೃದ್ಧಿಯಿಂದ ಹಿಂದೆ ಬಿದ್ದಿವೆ. ಉದ್ಯಾನವನ, ರಸ್ತೆ, ಚರಂಡಿ ಸೇರಿದಂತೆ ಹಲವಾರು ಕಡೆಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಈ ಬಗ್ಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಿ ಕರವೇ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕುವ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವನಗೌಡ ಪೊಲೀಸ್ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಕರವೇ ಬಲಿಷ್ಠವಾಗಿದೆ ಎಂದರು. ರಾಜ್ಯ ಸಮಿತಿ ಸದಸ್ಯ ಹನುಮಂತಪ್ಪ ಮೇಟಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕರವೇ ಗದಗ ಜಿಲ್ಲಾ ಘಟಕ ಬೆಂಗಳೂರಿನಂತೆ ಸಂಘಟನೆಯಲ್ಲಿ ಶಿಸ್ತಿನಿಂದ ತೊಡಗಿದೆ. ಜಿಲ್ಲೆಯಲ್ಲಿ ಸಂಘಟನೆ ಗಟ್ಟಿಯಾಗಿದೆ ಎಂದರು. ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ ಹಾಗೂ ರಾಜ್ಯ ಸಂಚಾಲಕ ರೆಹಮಾನ್ ಹೋಳಿ ಜಿಲ್ಲೆಯ ಸಂಘಟನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾಧ್ಯಕ್ಷ ಸಾಗರ ಗಾಯಕವಾಡ, ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಜಿಲ್ಲಾ ಗೌರವಾಧ್ಯಕ್ಷ ಉಮೇಶ ಮೇಟಿ, ವಿನಾಯಕ ಬದಿ, ಕುಮಾರ ರೇವಣ್ಣನವರ, ಹನಮಂತಪ್ಪ ಪೂಜಾರ, ಕೃಷ್ಣ ಲಮಾಣಿ, ಮುತ್ತಣ್ಣ ಚೌಡಣ್ಣನವರ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಲೋಕೆಶ್ ಸೂತಾರ, ನರಗುಂದ ತಾಲೂಕಾಧ್ಯಕ್ಷ ನಬಿ ಕಿಲ್ಲೇದಾರ, ಶಿವು ಮಠದ, ಅಶೋಕ ಜಗಳೂರ, ರಾಮನಗೌಡ ಹಳೇಮನಿ, ಮಹಿಳಾ ಘಟಕದ ಪ್ರ. ಕಾರ್ಯದರ್ಶಿ ಮಹದೇವ ದೊಡ್ಡಗೌಡ್ರ, ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮೀ ಹಿತ್ತಲಮನಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗದಗ ಜಿಲ್ಲೆಯಾದ್ಯಂತ ಈ ಕೂಡಲೇ ಎಲ್ಲ ಬಡವರಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕು. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕವಾಗಿ ಪ್ರಕಟಿಸುವ ಜಾಹೀರಾತುಗಳನ್ನು ಕೂಡ ಕನ್ನಡದಲ್ಲಿಯೇ ಪ್ರಕಟಿಸಬೇಕು. ಇಲ್ಲದಿದ್ದರೆ ಅಂತಹ ಸಂಸ್ಥೆಗಳಿಗೂ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಹನುಮಂತಪ್ಪ ಅಬ್ಬಿಗೇರಿ ಎಚ್ಚರಿಸಿದರು.


