ಕ್ಷೇತ್ರದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವೆ : ಗುರುನಾಥ ದಾನಪ್ಪನವರ

0
congress
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದಲಿತ ಸಮಾಜದ ಪ್ರಬಲ ಮುಖಂಡ, ಬಿಜೆಪಿಯ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಸೋಮವಾರ ಗದಗನಲ್ಲಿ ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

Advertisement

ರವಿವಾರ ಲಕ್ಷ್ಮೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರ ನಡೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವದಾಗಿ ಹೇಳಿದ್ದರು. ಸೋಮವಾರ ದಿಢೀರನೆ ಗದಗ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸಚಿವ ಎಚ್.ಕೆ. ಪಾಟೀಲರು ದಾನಪ್ಪನವರ ಅವರನ್ನು ಪಕ್ಷದ ಶಾಲು, ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.

ಈ ಸಮಯದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಗುರುನಾಥ ದಾನಪ್ಪನವರ ಬಿಜೆಪಿಯ ತತ್ವ-ಸಿದ್ದಾಂತ, ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದು ಶಿರಹಟ್ಟಿ ಸೇರಿದಂತೆ ಈ ಭಾಗಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತದೆ.

ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸುವಲ್ಲಿ ಯಾವುದೇ ಸಂಶಯವಿಲ್ಲ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಇಂದಿನಿಂದಲೇ ಅವರು ಕಾರ್ಯನಿರ್ವಹಿಸಲಿ. ಇಂತಹ ಅನೇಕ ಪ್ರಮುಖ ಮುಖಂಡರು ಈ ಭಾಗದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ನುಡಿದರು.

ಪಕ್ಷ ಸೇರ್ಪಡೆಗೊಂಡ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಅನೇಕ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಜಿಲ್ಲಾ ಹಾಗೂ ಮಂಡಳ ಘಟಕದವರು ಮಾಡುತ್ತಿದ್ದಾರೆ. ಇವರ ನಡೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಮಂಡಳ, ನಗರ, ಜಿಲ್ಲಾ ಘಟಕಗಳು ಸೇರಿದಂತೆ ಪಕ್ಷದ ಯಾವುದೇ ಪದಾಧಿಕಾರಿಗಳ ಆಯ್ಕೆಯಲ್ಲಿ ನಮ್ಮ ಕಾರ್ಯಕರ್ತರು ಎನ್ನುವ ಉದ್ದೇಶದಿಂದ ಅವಕಾಶ ನೀಡದಿರುವದು ಹಾಗೂ ಒಂದು ವರ್ಷದಿಂದ ಪಕ್ಷದ ಯಾವುದೇ ಬೈಠಕ್‌ಗಳಿಗೆ, ಸಭೆಗಳಿಗೆ ನನ್ನನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸಿದ್ದಲಿಂಗೇಶ ಪಾಟೀಲ, ರಾಜಣ್ಣ ಕುಂಬಿ, ತಿಪ್ಪಣ್ಣ ಸಂಶಿ, ಫಕ್ಕೀರೇಶ ಮ್ಯಾಟಣ್ಣವರ, ರಾಮು ಅಡಗಿಮನಿ ಮುಂತಾದವರಿದ್ದರು.

ಬಿಜೆಪಿಯ ಧೋರಣೆಯಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದೇನೆ. ಅಲ್ಲದೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಅನೇಕ ಸಿದ್ಧಾಂತಗಳನ್ನು ಒಪ್ಪಿ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವದಾಗಿ ಗುರುನಾಥ ದಾನಪ್ಪನವರ ಹೇಳಿದರು.


Spread the love

LEAVE A REPLY

Please enter your comment!
Please enter your name here