ಬೆಂಗಳೂರು: ವಿಂಜೋ ಆನ್ಲೈನ್ ಗೇಮಿಂಗ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ವಿಂಜೋ ಪ್ರೈವೇಟ್ ಲಿಮಿಟೆಡ್, ಕಂಪನಿಯ ನಿರ್ದೇಶಕರಾದ ಪವನ್ ನಂದಾ, ಸೌಮ್ಯ ಸಿಂಗ್ ರಾಥೋಡ್, ಹಾಗೂ ವಿಂಜೋದ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್, ವಿಂಜೋ ಎಸ್ಜಿ ಪ್ರೈವೇಟ್ ಲಿಮಿಟೆಡ್ ಮತ್ತು ಜೋ ಪ್ರೈವೇಟ್ ಲಿಮಿಟೆಡ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಇ.ಡಿ ತನಿಖೆಯಲ್ಲಿ ಸುಮಾರು 3,522 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಬಳಿಕ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ತನಿಖೆಯ ಭಾಗವಾಗಿ ವಿಂಜೋ ಕಂಪನಿಯ ಕಚೇರಿಗಳು, ನಿರ್ದೇಶಕರ ನಿವಾಸಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಫಿಕ್ಸೆಡ್ ಡೆಪಾಸಿಟ್ ಹಾಗೂ ಕ್ರಿಪ್ಟೋಕರೆನ್ಸಿ ವಾಲೆಟ್‌ಗಳು ಸೇರಿದಂತೆ ಸುಮಾರು 690 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ.
ವಿಂಜೋ ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ ನಡೆಸುತ್ತಿದ್ದು, ಸುಮಾರು 25 ಕೋಟಿ ಬಳಕೆದಾರರನ್ನು ಹೊಂದಿತ್ತು. 100ಕ್ಕೂ ಹೆಚ್ಚು ಆಟಗಳನ್ನು ನೀಡುತ್ತಿದ್ದ ಕಂಪನಿ, ಬಳಕೆದಾರರ ಬೆಟ್ಟಿಂಗ್ ಮೊತ್ತದಿಂದ ಕಮಿಷನ್ ಪಡೆಯುತ್ತಿತ್ತು. ಆರಂಭದಲ್ಲಿ ಬೋನಸ್ ನೀಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಆದರೆ ನಂತರ ತಂತ್ರಜ್ಞಾನದ ಮೂಲಕ ಬಳಕೆದಾರರನ್ನು ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರೂ. ವಂಚನೆ ನಡೆಸಲಾಗಿದೆ ಎಂದು ಇ.ಡಿ ತಿಳಿಸಿದೆ.
ಭಾರತ ಸರ್ಕಾರ ರಿಯಲ್ ಮನಿ ಗೇಮ್ಸ್ ನಿಷೇಧಿಸಿದ ನಂತರವೂ, ಬಳಕೆದಾರರ 47.66 ಕೋಟಿ ರೂ. ಠೇವಣಿಯನ್ನು ವಿಂಜೋ ಹಿಂದಿರುಗಿಸಿಲ್ಲ. 2021–22ನೇ ಆರ್ಥಿಕ ವರ್ಷದಲ್ಲಿ 3,522.05 ಕೋಟಿ ರೂ. ವಂಚನೆಯಿಂದ ಗಳಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್ ಕಂಪನಿಗಳಿಗೆ ವರ್ಗಾಯಿಸಿದ್ದು, ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ಸುಮಾರು 55 ಮಿಲಿಯನ್ ಯುಎಸ್ ಡಾಲರ್ ಹಣ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ ಎಂದು ಇ.ಡಿ ಹೇಳಿದೆ.



