ಬೆಳಗಾವಿಯಲ್ಲಿ ಸೋಮವಾರ ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರ, ಸುವರ್ಣಸೌಧದ ಸುತ್ತ ಹೈಅಲರ್ಟ್

0
Spread the love

ಬೆಳಗಾವಿ:- ಚಳಿಗಾಲದ ಅಧಿವೇಶನ ಡಿಸೆಂಬರ್ 8ರ ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿದೆ. ಅಧಿವೇಶನಕ್ಕೆ ಕುಂದಾನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ

Advertisement

ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ. ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಈಗಾಗಲೇ ಈಗ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿವೆ.ಹಂತಹಂತವಾಗಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸುವ ಯೋಜನೆ ರೂಪಿಸಲಾಗಿದೆ.

ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರವಾಗಲಿವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸರಕಾರದಿಂದ ಮಾಹಿತಿ ಕೋರಲಿವೆ ಎನ್ನಲಾಗಿದೆ

ಬೆಳಗಾವಿಗೆ ಸಿ.ಎಂ ಆಗಮನ:-

ಇನ್ನೂ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ಬೆಳಗಾವಿಗೆ ಬಂದಿಳಿದರು. ಇಲ್ಲಿನ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಸಿದ್ದರಾಮಯ್ಯ ಅವರಿಗೆ ಸ್ವಾಗತಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹಾದೇವಪ್ಪ, ಕೃಷ್ಣ ಬೈರೇಗೌಡ ಇತರರಿದ್ದರು.

ಬೆಳಗಾವಿ ಸುವರ್ಣಸೌಧದ ಸುತ್ತ ಹೈಅಲರ್ಟ್:-

ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಬಳಿಕ ಎಚ್ಚೆತ್ತುಕೊಳ್ಳಲಾಗಿದ್ದು, ಅಧಿವೇಶನದ ವೇಳೆ ನಿಗಾ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಬೆಳಗಾವಿ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ ನಗರದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 6 ಎಸ್ಪಿ ದರ್ಜೆಯ ಪೊಲೀಸ್‌ ಅಧಿಕಾರಿಗಳು, 146 ಹಿರಿಯ ಪೊಲೀಸ್ ಅಧಿಕಾರಿಗಳು, 3,820 ಪೊಲೀಸ್ ಸಿಬ್ಬಂದಿ, 500 ಹೋಂ ಗಾರ್ಡ್ಸ್, 8 ಕ್ಷಿಪ್ರ ಕಾರ್ಯಪಡೆ, 10 ಡಿಎಆರ್ ತುಕಡಿ, 35 ಕೆಎಸ್‌ಆರ್‌ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡಗಳು ಭದ್ರತೆಗಾಗಿ ನಿಯೋಜನೆಗೊಂಡಿವೆ.

ಸುವರ್ಣ ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಇರಲಿದ್ದು, ಸುವರ್ಣ ಗಾರ್ಡನ್ ಮತ್ತು ಅಲಾರವಾಡ ಬಳಿ ಪ್ರತಿಭಟನೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here