ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಸವೇಶ್ವರ ಸಿಬಿಎಸ್ಸಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸಾಕ್ಷಿ ರವಿ ದೇವರಡ್ಡಿ ಈಗಾಗಲೆ ಲೇಖಕಿಯಾಗಿ ಹೊರಹೊಮ್ಮಿದ್ದಾಳೆ. ಅವಳು ಬರೆದಿರುವ 2ನೇ ಪುಸ್ತಕ `ಸಾಕ್ಷಿ ಮಾತುಕತೆ’ ಸೆ. 3ರಂದು ಮಧ್ಯಾಹ್ನ 2ಕ್ಕೆ ಇಲ್ಲಿನ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ವಹಿಸಲಿದ್ದು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಜಿ.ಕೆ. ಕಾಳೆ, ಸದಾಶಿವ ಕರಡಿ, ವಿ.ಬಿ. ಸೋಮನಕಟ್ಟಿಮಠ ಮತ್ತು ಪ್ರಾಚಾರ್ಯ ಬಿ.ಎಚ್. ಬಂಡಿಹಾಳ ಉಪಸ್ಥಿತರಿರುವರು.
ಹಿರಿಯ ಸಾಹಿತಿ ಚಂದ್ರಶೇಖರ ವಸ್ತçದ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಲೇಖಕಿ ಮಮತಾ ಅರಸಿಕೇರಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಶಿಕ್ಷಕ ಮಹೇಶ್ ಎಸ್.ಎಚ್. ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಲೇಖಕಿ ಸಾಕ್ಷಿ ದೇವರಡ್ಡಿ ಉಪಸ್ಥಿತರಿರುವರು ಎಂದು ತಿಳಿಸಿರುವ ನರೇಗಲ್ಲ ಹೋಬಳಿ ಘಟಕದ ಅಧ್ಯಕ್ಷ ಎಂ.ವಿ. ವೀರಾಪೂರ, ಈ ಸಮಾರಂಭವು ಎಸ್ಎವಿವಿಪಿ ಸಮಿತಿ ನರೇಗಲ್ಲ, ಬಸವೇಶ್ವರ ಸಿಬಿಎಸ್ಸಿ ನರೇಗಲ್ಲ ಮತ್ತು ಕಸಾಪ ಹೋಬಳಿ ಘಟಕ ನರೇಗಲ್ಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಲಿದೆ ಎಂದು ತಿಳಿಸಿದ್ದಾರೆ.


