ಬೆಂಗಳೂರು: ಗ್ರಾಹಕರಂತೆ ಆಭರಣ ಪ್ರದರ್ಶನ ಮೇಳಕ್ಕೆ ಹೋಗಿ ಆಭರಣಗಳನ್ನ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಜಹೀರಾ ಫಾತಿಮಾ (64) ಬಂಧಿತ ಆರೋಪಿಯಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆ ವ್ಯಾಪ್ತಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಫೈವ್ ಸ್ಟಾರ್ ಹೋಟೆಲ್‌ವೊಂದರಲ್ಲಿ ಜನವರಿ 17ರಿಂದ 19ರವರೆಗೂ ಚಿನ್ನಾಭರಣಗಳ ಮೇಳ ಆಯೋಜಿಸಲಾಗಿತ್ತು.
ಆಭರಣ ಮೇಳದಲ್ಲಿ ಮಳಿಗೆಯೊಂದಕ್ಕೆ ಜನವರಿ 18ರಂದು ಸಂಜೆ ಗ್ರಾಹಕಿಯ ಸೋಗಿನಲ್ಲಿ ಬಂದಿದ್ದ ಆರೋಪಿ, 11.950 ಗ್ರಾಂನ ಡೈಮಂಡ್ ಬ್ರೇಸ್‌ಲೇಟ್ ಹಾಗೂ 59.100 ಗ್ರಾಂನ ಚಿನ್ನದ ಬಳೆಯನ್ನ ಕದ್ದು ಪರಾರಿಯಾಗಿದ್ದಳು. ಮಳಿಗೆ ತೆರದಿದ್ದ ಜ್ಯೂವೆಲರ್ಸ್ ಅಂಗಡಿಯ ಮ್ಯಾನೇಜರ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು, ಕಳ್ಳಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತೆಯಿಂದ ಒಟ್ಟು 8 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂನ ಒಂದು ಡೈಮಂಡ್ ಬ್ರೇಸ್‌ಲೇಟ್ ವಶಕ್ಕೆ ಪಡೆಯಲಾಗಿದೆ.