ಚಿಕ್ಕೋಡಿ: ಕಬ್ಬಿನ ತೋಟದಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಸುಜಾತಾ ಪವಾರ (34) ಮೃತ ಮಹಿಳೆ. ಮಾರ್ಚ್ 5ರಂದು ಅಥಣಿ ಪಟ್ಟಣ ಸಮೀಪದ ಪ್ರದೀಪ್ ಗುಂಡಾ ಎಂಬುವವರ ಕಬ್ಬಿನ ತೋಟದಲ್ಲಿ ಈ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ. ಮೃತ ಸುಜಾತಾ, ಹಾರೂಗೇರಿಯಲ್ಲಿ ವಾಸವಿದ್ದ ಗಂಡನೊಂದಿಗೆ ಸಂಬಂಧ ಕಡಿದುಕೊಂಡು ತವರು ಮನೆ ಅಥಣಿಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಈ ನಡುವೆ ಕುಮಾರ ಹವಾಲ್ದಾರ್ ಎಂಬಾತನೊಂದಿಗೆ ಸುಜಾತಾಳಿಗೆ ಸಂಬಂಧ ಬೆಳೆದುಬಂದಿತ್ತು. ಮಹಿಳೆಯ ಆಸ್ತಿ ಕಬಳಿಸುವ ಉದ್ದೇಶದಿಂದಲೇ ಕುಮಾರ ಈ ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಮಾರ್ಚ್ 5ರಂದು ಮಧ್ಯಾಹ್ನ ಆರೋಪಿ ಕುಮಾರ, ಸುಜಾತಾಳನ್ನು ಬೈಕ್‌ನಲ್ಲಿ ಕರೆದೊಯ್ದು ಕಬ್ಬಿನ ತೋಟದಲ್ಲಿ ಆಕೆಯ ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



