ಬೆಂಗಳೂರು: ಬೆಂಗಳೂರು ನಗರದ ಗಾಯತ್ರಿ ನಗರದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 53 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ರಮೇಶ್ ಬಾಬು ಅವರ ಪತ್ನಿ ಸವಿತಾ ದುರ್ಮರಣ ಹೊಂದಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.



