ಮಂಗಳೂರು:- ನಾಯಿ ಕಚ್ಚಿದ್ರೂ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಮಹಿಳೆಯೋರ್ವರು ರೇಬಿಸ್ ನಿಂದ ಸಾವನ್ನಪ್ಪಿದ ಘಟನೆ ಮಂಗಳೂರಿನ ಸಂಪಾಜೆಯ ಕಲ್ಲುಗುಂಡಿ ಬಳಿ ಜರುಗಿದೆ.
ಮಾ.7 ರಂದು ಅರಂತೋಡಿಗೆ ತೋಟದ ಕೆಲಸಕ್ಕೆ 42 ವರ್ಷದ ಮಹಿಳೆ ತೆರಳಿದ್ದ ವೇಳೆ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿದೆ. ನಾಯಿ ಮರಿ ಕಚ್ಚಿದ್ದರೂ ಮಹಿಳೆ ಯಾರಿಗೆ ತಿಳಿಸದೇ, ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ್ದರು.
ಮಾ.17 ಅಂದ್ರೆ ಸೋಮವಾರ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆ ಚಿಕಿತ್ಸೆಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ನೀರನ್ನು ನೋಡಿ ಕಿರುಚಾಡಲು ಆರಂಭಿಸಿದ್ದಾರೆ.
ವಿಚಿತ್ರ ವರ್ತನೆ ತೋರುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಬಳಿ ಮತ್ತಷ್ಟು ಪ್ರಶ್ನೆ ಕೇಳಿದಾಗ ನಾಯಿ ಕಚ್ಚಿದ್ದನ್ನು ತಿಳಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಸುಳ್ಯ ವೈದ್ಯರ ಶಿಫಾರಸಿನಂತೆ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮಹಿಳೆ ಮೃತಪಟ್ಟಿದ್ದಾರೆ.