ಹರಿಯಾಣ: ಹರಿಯಾಣದಲ್ಲಿ ಮಹಿಳೆಯೊಬ್ಬಳು ಹತ್ತು ಹೆಣ್ಣುಮಕ್ಕಳ ಬಳಿಕ ಇದೀಗ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿ ಚರ್ಚೆಗೆ ಕಾರಣವಾಗಿದೆ. ತಾಯಿ ಮತ್ತು ಶಿಶುವಿನ ಆರೋಗ್ಯದ ಜೊತೆಗೆ, ಗಂಡು ಮಗು ಬೇಕೇ ಬೇಕು ಎನ್ನುವ ಮನಸ್ಥಿತಿಯ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.
ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹೆರಿಗೆ ಅತ್ಯಂತ ಅಪಾಯಕರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ವೈದ್ಯ ಡಾ. ನರವೀರ್ ಶಿಯೋರನ್ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ತಾಯಿಗೆ ಮೂರು ಯುನಿಟ್ ರಕ್ತ ನೀಡಬೇಕಾಯಿತು. ಪ್ರಸ್ತುತ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜನವರಿ 3ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವರು ಈಗ ಫತೇಹಾಬಾದ್ ಜಿಲ್ಲೆಯ ತಮ್ಮ ಹಳ್ಳಿಗೆ ಮರಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್, “ನಮಗೂ ಹಾಗೂ ನನ್ನ ಹೆಣ್ಣುಮಕ್ಕಳಿಗೂ ತಮ್ಮನೊಬ್ಬ ಬೇಕೆಂಬ ಆಸೆ ಇತ್ತು” ಎಂದು ಹೇಳಿದ್ದಾರೆ.
2007ರಲ್ಲಿ ವಿವಾಹವಾದ ದಂಪತಿಗೆ ಹಿರಿಯ ಮಗಳು 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. “ನಮ್ಮ ಆದಾಯ ಕಡಿಮೆ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ. ಏನೇ ನಡೆದರೂ ಅದು ದೇವರ ಇಚ್ಛೆ. ಇದರಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.



