ಚಿಕ್ಕಮಗಳೂರು: ಅನೈತಿಕ ಸಂಬಂಧಕ್ಕೆ ಗೃಹಣಿಯ ಬರ್ಬರ ಹತ್ಯೆ ನಡೆದಿದೆ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿಚ್ಚಬ್ಬಿ ಗ್ರಾಮದ ತೃಪ್ತಿ 25 ಮೃತ ದುರ್ದೈವಿ. 25 ವರ್ಷದ ಗೃಹಿಣಿಯನ್ನ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ವಾಟ್ಸಾಪ್ ಸ್ನೇಹಿತ ಚಿರಂಜೀವಿ ಕೊಲೆ ಆರೋಪಿಯಾಗಿದ್ದು, ಚಾಕುವಿನಿಂದ ಚುಚ್ಚಿದರೂ ತೃಪ್ತಿ ಸಾಯಲಿಲ್ಲ ಎಂದು ಆರೋಪಿ ಕೆರೆಗೆ ಎಸೆದಿದ್ದಾನೆ.
ಕೊಲೆ ಆರೋಪಿ ಚಿರಂಜೀವಿ ತೃಪ್ತಿಗೆ ವಾಟ್ಸಪ್ ಮೂಲಕ ಪರಿಚಯವಾಗಿದ್ದ. ಬಳಿಕ ಅವರಿಬ್ಬರ ನಡುವೆ ಸ್ನೇಹ ಸಂಬಂಧ ಬೆಳೆದಿದ್ದು, ತಿಂಗಳ ಹಿಂದೆ ತೃಪ್ತಿ ಮನೆ ಬಿಟ್ಟು ಚಿರಂಜೀವಿ ಜೊತೆಗೆ ಹೋಗಿದ್ದಾಳೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೂಡ ದಾಖಲಾಗಿತ್ತು.
ವಾಪಸ್ ಬಂದ ಬಳಿಕ ಮನೆಯವರ ರಾಜಿ ಸಂಧಾನದ ಬಳಿಕ ಆತನ ಜೊತೆಗಿನ ಸ್ನೇಹ ಬಿಟ್ಟಿದ್ದಳು. ಇದೇ ಕೋಪದಲ್ಲಿ ಇಂದು ಏಕಾಏಕಿ ಮನೆಗೆ ಬಂದ ಚಿರಂಜೀವಿ ಮಕ್ಕಳ ಎದುರೇ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನ ನಡೆಸಿದ್ದಾನೆ. ಆಗಲೂ ಆಕೆ ಸಾಯಲಿಲ್ಲ ಎಂದು ಮನೆ ಹಿಂದಿನ ಕೆರೆಗೆ ಎಸೆದಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ದುಷ್ಕೃತ್ಯ ನಡೆದಿದ್ದು, ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.