ಮಂಡ್ಯ:- ಇತ್ತೀಚಿನ ದಿನಗಳಲ್ಲಿ ಟೋಲ್ ಕಟ್ಟೋ ವಿಚಾರಕ್ಕೆ ಟೋಲ್ ಸಿಬ್ಬಂದಿಗಳು ಹಾಗೂ ವಾಹನ ಸವಾರರ ನಡುವೆ ಕಿರಿಕ್ ನಡೆಯುತ್ತಿರುತ್ತಲೇ ಇರುತ್ತದೆ.
ಸಾಮಾನ್ಯ ಸವಾರರು ಹಣ ಕಟ್ಟೋಕೆ ಹಿಂದೆ ಮುಂದೆ ನೋಡೋದು ಸಹಜ. ಆದರೆ ರಾಜಕೀಯ ಮುಖಂಡರಿಗೇನಾಗಿದೆ. ಜನರಿಗೆ ಮಾದರಿ ಆಗಬೇಕಾದವರೇ ಈ ರೀತಿ ವರ್ತನೆ ಮಾಡಿದ್ರೆ ಹೇಗೆ!? ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಎಸ್, ರಾಜಕೀಯ ಪುಡಾರಿಗಳು ಪುಂಡಾಟ ನಡೆಸಿ ಟೋಲ್ ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ತೋರಿದ್ದಾರೆ. ಈ ಘಟನೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಜರುಗಿದೆ.
ಟೋಲ್ ಕಟ್ಟಿ ಎಂದಿದ್ದಕ್ಕೆ ಕಾಂಗ್ರೆಸ್ ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿದ್ದು ಅಲ್ಲದೇ ಹಲ್ಲೆ ನಡೆಸಿದ್ದಾರೆ. ನಿನ್ನೆ ಮದ್ಯಾಹ್ನ ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್ ಹಾಕಿದ ಕಾರು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿದೆ.
ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಪ್ರಯಾಣಿಕರು ಟೋಲ್ ಕಟ್ಟಲು ನಿರಾಕರಿಸಿದ್ದಾರೆ. ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ.
ನಾನು ಕಾಂಗ್ರೆಸ್ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.