ತುಮಕೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಮಹಿಳೆಯೊಬ್ಬರು ಎಲೆ ಅಡಿಕೆ ಎಂಜಲು ಉಗಿದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಪಾವಗಡದಿಂದ ತುಮಕೂರು ಕಡೆಗೆ ಕೆಎಸ್ಆರ್ಟಿಸಿ ಬಸ್ ಹೊರಟಿತ್ತು. ಪಾವಗಡ ಪಟ್ಟಣದ ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಜನ ಬಸ್ ನಲ್ಲಿ ಕುಳಿತಿದ್ರು. ಬೆಂಗಳೂರಿಗೆ ಹೋಗಬೇಕಿದ್ದ 6 ಜನ ಪ್ರಮಾಣಿಕರು ಕುಳಿತುಕೊಂಡಿದ್ದರು. ಆದ್ರೆ, ಈ ಬಸ್ ಬೆಂಗಳೂರಿಗೆ ಹೋಗಲ್ಲ ತುಮಕೂರಿಗೆ ಹೋಗುತ್ತೆ ಇಳಿಯಿರಿ ಎಂದು ಕಂಡಕ್ಟರ್ ಹೇಳಿದ್ದಾರೆ. ಇಳಿಯುವ ವೇಳೆ ಮಹಿಳೆ ಬಸ್ ಒಳಗೆ ಎಲೆ ಅಡಿಕೆ ಉಗಿದಿದ್ದಾಳೆ. ಇದನ್ನ ಪ್ರಶ್ನೆ ಮಾಡಿದ ಕಂಡಕ್ಟರ್ ಕ್ಲೀನ್ ಮಾಡುವಂತೆ ಮಹಿಳೆಗೆ ತಾಕೀತು ಮಾಡಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಮಹಿಳೆ ಕಡೆಯವರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಕಂಡಕ್ಟರ್ ನನ್ನ ಕೊರಳಪಟ್ಟಿ ಹಿಡಿದು ಬಸ್‌ನಿಂದ ಹೊರಗೆ ಕರೆತಂದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಪಾವಗಡ ಕೆಎಸ್ಆರ್ಟಿಸಿ ಡಿಪೋ ಕಂಡಕ್ಟರ್ ಆಗಿರುವ ಅನಿಲ್ ಕುಮಾರ್ ಈ ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಾವಗಡ ಪೊಲೀಸರು ದೂರು ದಾಖಲಿಸಿಕೊಂಡು ಮಹಿಳೆ ಸೇರಿ ನಾಲ್ವರನ್ನ ಬಂಧಿಸಿದ್ದಾರೆ.