ಕಾರವಾರ, ಜನವರಿ 3: ಮದುವೆಗೆ ಒಪ್ಪದ ಕಾರಣಕ್ಕೆ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಸಂಭವಿಸಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಮೃತ ಮಹಿಳೆಯಾಗಿದ್ದು, ಆರೋಪಿ ರಫೀಕ್ ಎಂಬ ಯುವಕ ಕಳೆದ ಹಲವು ವರ್ಷಗಳಿಂದ ಆಕೆಯೊಂದಿಗೆ ಪ್ರೀತಿಯಲ್ಲಿದ್ದ ಎಂದು ತಿಳಿದುಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ವಿಚ್ಛೇದನಗೊಂಡಿದ್ದ ರಂಜಿತಾಳಿಗೆ ಒಂದು ಮಗು ಕೂಡ ಇದೆ. ಆಕೆ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಚ್ಛೇದನದ ಕೆಲ ತಿಂಗಳ ನಂತರ ರಫೀಕ್ ಮತ್ತು ರಂಜಿತಾಳ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಕುಟುಂಬಗಳ ನಡುವೆಯೂ ಉತ್ತಮ ಸಂಬಂಧವಿದ್ದು, ರಫೀಕ್ ನಿರಂತರವಾಗಿ ರಂಜಿತಾಳ ಮನೆಗೆ ಬರುತ್ತಿದ್ದನೆಂದು ಸ್ಥಳೀಯರು ಹೇಳುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ರಫೀಕ್ ಮದುವೆಗೆ ಒತ್ತಡ ಹೇರುತ್ತಿದ್ದ. ಇದಕ್ಕೆ ರಂಜಿತಾ ತೀವ್ರ ವಿರೋಧ ವ್ಯಕ್ತಪಡಿಸಿ, “ನನಗೆ ಮತ್ತೆ ಮದುವೆ ಬೇಡ” ಎಂದು ಸ್ಪಷ್ಟವಾಗಿ ತಿಳಿಸಿದ್ದಳು.
ಶನಿವಾರ ಶಾಲೆಯ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ, ರಫೀಕ್ ನಡು ರಸ್ತೆಯಲ್ಲೇ ಆಕೆಯನ್ನು ತಡೆದು ಮದುವೆ ವಿಚಾರವಾಗಿ ಜಗಳ ನಡೆಸಿದ್ದಾನೆ. ಈ ವೇಳೆ ಕೋಪಗೊಂಡ ರಫೀಕ್ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ತೀವ್ರ ಗಾಯಗೊಂಡ ರಂಜಿತಾಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿದಿದೆ.



