ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವೀರರಾಣಿ ಕಿತ್ತೂರು ಚೆನ್ನಮ್ಮ ಧೈರ್ಯ, ದೇಶಪ್ರೇಮ ಮತ್ತು ನಿಷ್ಠೆಯ ಪ್ರತೀಕ. ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಅಥವಾ ಯುದ್ಧಕಲೆ ಕಲಿಯುವ ಅವಕಾಶ ವಿರಳವಾಗಿತ್ತು. ಆದರೆ ಚೆನ್ನಮ್ಮ ಎಲ್ಲ ಸಾಂಪ್ರದಾಯಿಕ ಬಿಗಿಗಳನ್ನು ಮುರಿದು ನಿಜವಾದ ನಾಯಕಿಯಾಗಿ ಬ್ರಿಟಿಷರ ವಿರುದ್ಧ ಹೋರಾಟಗೈದ ಮಹಾನ್ ಧೈರ್ಯವಂತ ಮಹಿಳೆ ಎಂದು ಪ.ಪಂ ಸದಸ್ಯೆ ಜ್ಯೋತಿ ಪಾಪ್ಪಗೌಡ್ರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಹಿನ್ನೆಲೆ ರಾಣಿ ಚೆನ್ನಮ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಂದಿನ ಯುದ್ಧದಲ್ಲಿ ರಾಣಿ ಚೆನ್ನಮ್ಮ ಕುದುರೆಯ ಮೇಲೇರಿ, ಕತ್ತಿಯನ್ನು ಬೀಸಿ ಶತ್ರುಗಳ ಕಣ್ಣಿಗೆ ಭಯ ಹುಟ್ಟಿಸಿದರು. ಅವರ ನೇತೃತ್ವದಲ್ಲಿ ಮಹಿಳೆಯರು ಮತ್ತು ಜನರು ಸೇರಿ ಬ್ರಿಟಿಷರನ್ನು ಎದುರಿಸಿ ಅನೇಕ ಸೈನಿಕರನ್ನು ಸೋಲಿಸಿದರು. ಅದು ಭಾರತದ ಮೊದಲ ಮಹಿಳಾ ಸಶಸ್ತ್ರ ಹೋರಾಟವಾಗಿತ್ತು. ಅವರ ಧೈರ್ಯ ಕೇವಲ ಯುದ್ಧಭೂಮಿಯಲ್ಲಲ್ಲ, ನ್ಯಾಯದ ಹೋರಾಟದಲ್ಲಿಯೂ ಸ್ಪಷ್ಟವಾಗಿತ್ತು. ನಾನು ಹೆಣ್ಣು, ಆದರೆ ನನ್ನ ಹೃದಯ ಸಿಂಹದಂತೆ. ಈ ಮಾತು ಇಂದಿಗೂ ಮಹಿಳೆಯರ ಆತ್ಮಸ್ಫೂರ್ತಿಗೆ ಪ್ರೇರಣೆ ಎಂದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಸ್ಥಾಯಿ ಕಮಿಟಿ ಚೇರಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ಈರಪ್ಪ ಜೋಗಿ, ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನಗೌಡ ಭೂಮನಗೌಡ, ನಾಮನಿರ್ದೇಶಿತ ಸದಸ್ಯರಾದ ಶೇಖಪ್ಪ ಕೆಂಗಾರ, ಕಳಕನಗೌಡ ಪೊಲೀಸ್‌ಪಾಟೀಲ, ಆಶ್ರಯ ಕಮಿಟಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸೇರಿದಂತೆ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಪ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಇಂದಿನ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ, ರಾಜಕೀಯದಲ್ಲಿ ಅಥವಾ ಮನೆಯ ಹೊಣೆಗಾರಿಕೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಚೆನ್ನಮ್ಮರಂತೆ ಧೈರ್ಯದಿಂದ ಮುನ್ನಡೆಯಬೇಕು. ಅವರ ಹೋರಾಟವು ಕೇವಲ ಇತಿಹಾಸವಲ್ಲ. ಅದು ಪ್ರತಿಯೊಬ್ಬ ಹೆಣ್ಣಿನ ರಕ್ತದಲ್ಲಿ ಹರಿಯುವ ಆತ್ಮಗೌರವದ ಶಕ್ತಿ. ಆದ್ದರಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕೇವಲ ಸಂಭ್ರಮದ ದಿನವಲ್ಲ, ಅದು ಮಹಿಳಾ ಶಕ್ತಿಯ ಜಾಗೃತಿಯ ಹಬ್ಬ. ಹೆಣ್ಣೆಂದರೆ ಶಕ್ತಿ, ಹೆಣ್ಣೆಂದರೆ ಧೈರ್ಯ ಎಂಬ ಸತ್ಯವನ್ನು ಸ್ಮರಿಸುವ ದಿನವಾಗಿದೆ ಎಂದರು.